ನವದೆಹಲಿ: ಯುದ್ಧ ಪೀಡಿತ ಉಕ್ರೇನ್ ನಿಂದ ಸುರಕ್ಷಿತವಾಗಿ ತಾಯ್ನಾಡಿಗೆ ಮರಳಿದ ನಂತರ ಅತಂತ್ರ ಭವಿಷ್ಯದ ಭಯದಲ್ಲಿದ್ದ ಭಾರತೀಯ ವಿದ್ಯಾರ್ಥಿಗಳಿಗೆ ಹಲವಾರು ಉಕ್ರೇನಿಯನ್ ವೈದ್ಯಕೀಯ ವಿಶ್ವವಿದ್ಯಾಲಯಗಳು ಆನ್‌ಲೈನ್ ತರಗತಿಗಳನ್ನು ಪ್ರಾರಂಭಿಸಿದ್ದು ಕೊಂಚ ನಿರಾಳ ತಂದಿದೆ. ಆದಾಗ್ಯೂ, ಪ್ರಾಯೋಗಿಕ ತರಗತಿಗಳಿಗೆ ಹಾಜರಾಗಲು ಸಾಧ್ಯವಿಲ್ಲದಿರುವುದಕ್ಕೆ ಕೆಲವು ವಿದ್ಯಾರ್ಥಿಗಳು ಚಿಂತಿತರಾಗಿದ್ದಾರೆ.
ರಷ್ಯಾದ ಪಡೆಗಳ ನಿರಂತರ ಶೆಲ್ ದಾಳಿಯ ನಡುವೆ ಉಕ್ರೇನ್‌ನಲ್ಲಿ ದೈಹಿಕ ತರಗತಿಗಳನ್ನು ನಡೆಸುವುದು ಅಸಾಧ್ಯವಾದ ಕಾರಣ, ಪಶ್ಚಿಮ ಉಕ್ರೇನ್‌ನಲ್ಲಿರುವ ಹಲವಾರು ವೈದ್ಯಕೀಯ ವಿಶ್ವವಿದ್ಯಾಲಯಗಳು ಸೋಮವಾರದಿಂದ ಆನ್‌ಲೈನ್ ತರಗತಿಗಳನ್ನು ಪ್ರಾರಂಭಿಸಿವೆ.
ಭಾರತೀಯ ವಿದ್ಯಾರ್ಥಿಗಳ ಪ್ರಕಾರ ಮುಂಬರುವ ದಿನಗಳಲ್ಲಿ ಇತರ ವಿಶ್ವವಿದ್ಯಾಲಯಗಳು ಆನ್‌ಲೈನ್ ತರಗತಿಗಳನ್ನು ಪುನರಾರಂಭಿಸಲು ಯೋಜಿಸಿವೆ. ಇನ್ನು ಮುಂದುವರಿದ ಶೆಲ್ ದಾಳಿಯ ನಡುವೆ ತಮ್ಮ ಶಿಕ್ಷಕರು ತಮ್ಮ ಮನೆ ಅಥವಾ ಸುರಕ್ಷಿತ ಸ್ಥಳಗಳಿಂದ ತರಗತಿಗಳನ್ನು ತೆಗೆದುಕೊಳ್ಳುತ್ತಿದ್ದಾರೆ ಎಂದು ಭಾರತೀಯ ವಿದ್ಯಾರ್ಥಿಗಳು ಹೇಳಿದ್ದಾರೆ.
ಡ್ಯಾನಿಲೊ ಹ್ಯಾಲಿಟ್ಸ್ಕಿ ಎಲ್ವಿವ್ ರಾಷ್ಟ್ರೀಯ ವೈದ್ಯಕೀಯ ವಿಶ್ವವಿದ್ಯಾಲಯ, ಇವಾನೊ-ಫ್ರಾಂಕಿವ್ಸ್ಕ್ ರಾಷ್ಟ್ರೀಯ ವೈದ್ಯಕೀಯ ವಿಶ್ವವಿದ್ಯಾಲಯ, ವಿನ್ನಿಟ್ಸಿಯಾ ನ್ಯಾಷನಲ್ ಪಿರೊಗೊವ್ ವೈದ್ಯಕೀಯ ವಿಶ್ವವಿದ್ಯಾಲಯ ಮತ್ತು ಬೊಗೊಮೊಲೆಟ್ಸ್ ರಾಷ್ಟ್ರೀಯ ವೈದ್ಯಕೀಯ ವಿಶ್ವವಿದ್ಯಾಲಯ ಸೋಮವಾರದಿಂದ ಆನ್‌ಲೈನ್ ತರಗತಿಗಳನ್ನು ಪ್ರಾರಂಭಿಸಿವೆ.
ಡ್ಯಾನಿಲೋ ಹ್ಯಾಲಿಟ್ಸ್ಕಿ ಎಲ್ವಿವ್ ನ್ಯಾಷನಲ್ ಮೆಡಿಕಲ್ ಯೂನಿವರ್ಸಿಟಿಯ ಪ್ರಥಮ ವರ್ಷದ ವಿದ್ಯಾರ್ಥಿ ಕನಿಷ್ಕ್ ತಮ್ಮ ಭವಿಷ್ಯದ ಬಗ್ಗೆ ಅನಿಶ್ಚಿತತೆಗಳಿರುವುದರಿಂದ ತರಗತಿಗಳು ಪುನರಾರಂಭಗೊಂಡಿರುವುದಕ್ಕೆ ಸಮಾಧಾನಗೊಂಡಿದ್ದಾರೆ.