ನವದೆಹಲಿ: ಎಸ್‌ಬಿಐ ನಡುವಿನ ಪ್ರಕರಣದಲ್ಲಿ ಆಸ್ತಿಗಳ ಸಂಪೂರ್ಣ ವಿವರಗಳನ್ನು ಬಹಿರಂಗಗೊಳಿಸದ ಕಾರಣಕ್ಕಾಗಿ ನ್ಯಾಯಾಂಗ ನಿಂದನೆ ಆರೋಪದಲ್ಲಿ ತಪ್ಪಿತಸ್ಥರೆಂದು ಸಾಬೀತಾಗಿರುವ ಉದ್ಯಮಿ ವಿಜಯ್ ಮಲ್ಯರ ಶಿಕ್ಷೆಯ ಪ್ರಮಾಣವನ್ನು ಸುಪ್ರೀಂ ಕೋರ್ಟ್ ಕಾಯ್ದಿರಿಸಿದೆ.
ನ್ಯಾಯಮೂರ್ತಿ ಯುಯು ಲಲಿತ್ ನೇತೃತ್ವದ ತ್ರಿಸದಸ್ಯ ಪೀಠ ಮತ್ತು ನ್ಯಾಯಮೂರ್ತಿಗಳಾದ ಎಸ್. ರವೀಂದ್ರ ಭಟ್ ಮತ್ತು ಪಿ.ಎಸ್. ನರಸಿಂಹ ಅವರನ್ನೊಳಗೊಂಡ ನ್ಯಾಯಪೀಠವು ಅಮಿಕಸ್ ಕ್ಯೂರಿ ಜೈದೇಪ್ ಗುಪ್ತಾ ಅವರ ವಾದವನ್ನು ಆಲಿಸಿತು.
ನ್ಯಾಯಾಲಯದ ಮುಂದೆ ಹಾಜರಾಗಲು ವಿಜಯ ಮಲ್ಯ ಅವರಿಗೆ ನ್ಯಾಯಾಲಯವು ಹಲವಾರು ಅವಕಾಶಗಳನ್ನು ನೀಡಿದ್ದರೂ ಅವರು ಹಾಜರಾಗಲಿಲ್ಲ ಎಂದು ಗುಪ್ತಾ ಹೇಳಿಕೆ ನೀಡಿದರು.
ಮಲ್ಯ ಅವರು ಬ್ಯಾಂಕ್‌ಗಳಿಗೆ ಸುಮಾರು 9,000 ಕೋಟಿ ರೂ ಬಾಕಿ ಉಳಿಸಿಕೊಂಡ ಆರೋಪ ಎದುರಿಸುತ್ತಿದ್ದಾರೆ. ಅವರು ತಮ್ಮ ಮಕ್ಕಳಿಗೆ 40 ಮಿಲಿಯನ್ ಡಾಲರ್ ಮೊತ್ತವನ್ನು ವರ್ಗಾಯಿಸಿದ್ದರು. ನ್ಯಾಯಾಲಯವು ಹೊರಡಿಸಿದ ಆದೇಶಗಳನ್ನು ಪಾಲಿಸದ ಕಾರಣಕ್ಕಾಗಿ, ಅವರ ಆಸ್ತಿಯ ಸಂಪೂರ್ಣ ವಿವರಗಳನ್ನು ಬಹಿರಂಗಪಡಿಸದ ಕಾರಣಗಳಿಗಾಗಿ, ನ್ಯಾಯಾಂಗ ನಿಂದನೆ ಅರ್ಜಿಗೆ ಉತ್ತರಿಸದ, ನ್ಯಾಯಾಲಯದ ಮುಂದೆ ಹಾಜರಾಗದಿದ್ದಕ್ಕಾಗಿ ತಪ್ಪಿತಸ್ಥರೆಂದು ನಿರ್ಣಯಿಸಲಾಯಿತು. ವಿಜಯ್ ಮಲ್ಯ ಇಂಗ್ಲೆಡಿನಲ್ಲಿ ಬಂಧನದಲ್ಲಿಲ್ಲ ಎಂಬುದನ್ನು ನ್ಯಾಯಾಲಯ ಗಮನಿಸಿದೆ.