ನವದೆಹಲಿ: ಯುದ್ಧ ಪೀಡಿತ ಉಕ್ರೇನ್ ನಿಂದ ಭಾರತಕ್ಕೆ ವಾಪಸ್ ಆಗಿರುವ ಸಾವಿರಾರು ವಿದ್ಯಾರ್ಥಿಗಳು ಈಗ ತಮ್ಮ ಎಂಬಿಬಿಎಸ್ ಪದವಿ ಪೂರೈಸುವುದು ಹೇಗೆ ಎಂಬ ಚಿಂತೆಯಲ್ಲಿದ್ದು, ಅವರಿಗಾಗಿ ಕೇಂದ್ರ ಆರೋಗ್ಯ ಸಚಿವಾಲಯ ಮತ್ತು ರಾಷ್ಟ್ರೀಯ ವೈದ್ಯಕೀಯ ಆಯೋಗವು ಎನ್ಎಂಸಿ(ವಿದೇಶಿ ವೈದ್ಯಕೀಯ ಪದವೀಧರ ಪರವಾನಗಿ)ಯು 2021 ರ ನಿಬಂಧನೆಗಳನ್ನು ಸಡಿಲಿಸುವ ಸಾಧ್ಯತೆ ಇದೆ.
ಉಕ್ರೇನ್‌ನಿಂದ ಹಿಂದಿರುಗಿದ ವೈದ್ಯಕೀಯ ವಿದ್ಯಾರ್ಥಿಗಳು ಭಾರತ ಅಥವಾ ವಿದೇಶದಲ್ಲಿರುವ ಖಾಸಗಿ ಕಾಲೇಜುಗಳಲ್ಲಿ ತಮ್ಮ ಕೋರ್ಸ್‌ಗಳನ್ನು ಪೂರ್ಣಗೊಳಿಸಲು ಕೇಂದ್ರ ಸರ್ಕಾರ ಪರ್ಯಾಯ ಮಾರ್ಗಗಳನ್ನು ಕಂಡುಕೊಳ್ಳುತ್ತಿದೆ.
ಈ ಸಂಬಂಧ NMC, ಆರೋಗ್ಯ ಸಚಿವಾಲಯ, MEA ಮತ್ತು NITI ಆಯೋಗದ ಅಧಿಕಾರಿಗಳು ಶೀಘ್ರದಲ್ಲೇ ಮಹತ್ವದ ಸಭೆ ನಡೆಸಲಿದ್ದಾರೆ ಮತ್ತು ಸಮಸ್ಯೆಯನ್ನು ಮಾನವೀಯ ಆಧಾರದ ಮೇಲೆ ಪರಿಶೀಲಿಸಲಾಗುವುದು ಮತ್ತು ಸಹಾನುಭೂತಿಯಿಂದ ನೋಡಲಾಗುವುದು ಎಂದು ಮೂಲಗಳು ತಿಳಿಸಿವೆ.
ರಾಷ್ಟ್ರೀಯ ವೈದ್ಯಕೀಯ ಆಯೋಗ(ವಿದೇಶಿ ವೈದ್ಯಕೀಯ ಪದವೀಧರ ಪರವಾನಗಿ)ದ ನಿಯಮಗಳು, 2021 ರ ನಿಬಂಧನೆಗಳ ಪ್ರಕಾರ, ಸಂಪೂರ್ಣ ಕೋರ್ಸ್, ತರಬೇತಿ ಮತ್ತು ಇಂಟರ್ನ್‌ಶಿಪ್ ಅನ್ನು ಅಧ್ಯಯನಕ್ಕೆ ತೆರಳಿದ ವಿದೇಶಿ ವೈದ್ಯಕೀಯ ಸಂಸ್ಥೆಯಲ್ಲಿಯೇ ಪೂರ್ಣಗೊಳಿಸಬೇಕು.
ವೈದ್ಯಕೀಯ ತರಬೇತಿ ಮತ್ತು ಇಂಟರ್ನ್‌ಶಿಪ್‌ನ ಯಾವುದೇ ಭಾಗವನ್ನು ಭಾರತದಲ್ಲಿ ಅಥವಾ ಪ್ರಾಥಮಿಕ ವೈದ್ಯಕೀಯ ಅರ್ಹತೆಯನ್ನು ಪಡೆದ ದೇಶವನ್ನು ಹೊರತುಪಡಿಸಿ ಬೇರೆ ಯಾವುದೇ ದೇಶದಲ್ಲಿ ಮಾಡಬಾರದು ಎಂಬ ನಿಬಂಧನೆಗಳಿವೆ.