ಕಾಸರಗೋಡು: ಎಡರಂಗ ಸರ್ಕಾರ ಕೇರಳದಲ್ಲಿ ಜಾರಿಗೊಳಿಸಲು ಮುಂದಾಗಿರುವ ಕೆ-ರೈಲ್ ಯೋಜನೆ ರಾಜ್ಯದ ಖಜಾನೆಯನ್ನು ಕೊಳ್ಳೆ ಹೊಡೆಯಲಿರುವ ಯೋಜನೆಯಾಗಲಿರುವುದಾಗಿ ರಾಜ್ಯ ಪ್ರತಿಪಕ್ಷ ಮುಖಂಡ ವಿ.ಡಿ ಸತೀಶನ್ ತಿಳಿಸಿದ್ದಾರೆ.
ಅವರು ರಾಜ್ಯಾದ್ಯಂತ ಕೆ-ರೈಲ್ ಸಿಲ್ವರ್ ಲೈನ್ ಯೋಜನೆ ವಿರುದ್ಧ ನಡೆದುಬರುತ್ತಿರುವ ಪ್ರತಿಭಟನೆಯ ಹಿನ್ನೆಲೆಯಲ್ಲಿ ಕಾಸರಗೋಡಿನಿಂದ ಜನಪರ ಸಮಿತಿ ಆರಂಭಿಸಿದ ಪ್ರತಿಭಟನಾ ಜಾಥಾ ಉದ್ಘಾಟಿಸಿ ಮಾತನಾಡಿದರು. ವಿಧಾನ ಸಭೆಯಲ್ಲಿ ಚರ್ಚಿಸದೆ ಯೋಜನೆ ಜಾರಿಗೊಳಿಸಲು ಮುಂದಾಗಿರುವ ಸರ್ಕಾರ, ರಾಜ್ಯದ ಜನತೆಗೆ ವಂಚನೆಯೆಸಗಿದೆ. ಪರಿಸರ ಹಾನಿ ಜತೆಗೆ ಜನರನ್ನು ವಸತಿರಹಿತರನ್ನಾಗಿಸುವ ಯೋಜನೆ ರಾಜ್ಯದಲ್ಲಿ ಎಂದಿಗೂ ಯಶಸ್ಸು ಕಾಣದು ಎಂದು ತಿಳಿಸಿದರು. ಜನಪರ ಸಮಿತಿ ರಾಜ್ಯ ಕಾರ್ಯದರ್ಶಿ ಎಂ.ಪಿ ಬಾಬುರಾಜ್ ಅಧ್ಯಕ್ಷತೆ ವಹಿಸಿದ್ದರು. ಎಸ್ ರಾಜೀವನ್, ಟಿ.ಟಿ ಇಸ್ಮಾಯಿಲ್, ಸಂಸದ ರಾಜ್‍ಮೋಹನ್ ಉಣ್ಣಿತ್ತಾನ್, ಎಂ.ಸಿ ಕಮರುದ್ದೀನ್ ಉಪಸ್ಥಿತಯರಿದ್ದರು. ರಾಜ್ಯಾದ್ಯಂತ ಸಂಚರಿಸಲಿರುವ ಜಾಥಾ ಮಾ.24ರಂದು ತಿರುವನಂತಪುರ ಸೆಕ್ರೆಟೇರಿಯೆಟ್‍ನಲ್ಲಿ ಸಮಾರೋಪಗೊಳ್ಳಲಿದೆ.