ನವದೆಹಲಿ: ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟಗೊಂಡಿದ್ದು ನಾಲ್ಕು ರಾಜ್ಯಗಳಲ್ಲಿ ಬಿಜೆಪಿ ಜಯಭೇರಿ ಬಾರಿಸಿದ್ದರೆ, ಪಂಜಾಬ್‌ನಲ್ಲಿ ಆಮ್ ಆದ್ಮಿ ಪಾರ್ಟಿ ಗದ್ದುಗೆಗೆ ಏರಿದೆ. ಮತದಾರರು ತಮ್ಮ ಇಷ್ಟದ ಪಕ್ಷ, ನಾಯಕ-ನಾಯಕಿಯರನ್ನು ಆಯ್ಕೆ ಮಾಡಲು ಮತ ಚಲಾಯಿಸಿರುವುದು ಒಂದೆಡೆಯಾದರೆ, ತಮಗೆ ಯಾರ ಮೇಲೂ ನಂಬಿಕೆ ಇಲ್ಲ, ಯಾವ ಪಕ್ಷವೂ ಬೇಡ, ಯಾರ ರಾಜಕಾರಣಿಯೂ ಬೇಡ ಎಂದವರು ಎಂಟು ಲಕ್ಷ ಮಂದಿ!
ಮತ ಚಲಾಯಿಸುವ ವೇಳೆ ಎಲ್ಲಾ ಅಭ್ಯರ್ಥಿಗಳ ಹೆಸರಿನ ಕೆಳಗೆ ಮತದಾರರಿಗೆ ನೋಟಾ ('ನನ್ ಆಫ್ ದಿ ಎಬೋವ್'- ಮೇಲಿನ ಯಾರೂ ಬೇಡ) ಎನ್ನುವ ಆಯ್ಕೆ ಕೊಟ್ಟಿರಲಾಗುತ್ತದೆ. ಅದನ್ನು ಈ ಐದು ರಾಜ್ಯಗಳಲ್ಲಿ ಒತ್ತಿದ ಮತದಾರರ ಸಂಖ್ಯೆ 7,99,302
ಚುನಾವಣಾ ಆಯೋಗದ ಅಧಿಕೃತ ವೆಬ್‌ಸೈಟ್‌ನಲ್ಲಿ ಈ ಮಾಹಿತಿಯನ್ನು ವಿವರಿಸಲಾಗಿದೆ. ಉತ್ತರ ಪ್ರದೇಶವು ಗರಿಷ್ಠ ಸಂಖ್ಯೆ 403 ವಿಧಾನಸಭಾ ಸ್ಥಾನಗಳನ್ನು ಹೊಂದಿದೆ. ಇದರಲ್ಲಿ 6,21,186 ಮತದಾರರು (ಶೇ. 0.7) ನೋಟಾ ಆಯ್ಕೆಯ ಬಟನ್ ಒತ್ತಿದ್ದಾರೆ. ಉಳಿದರಂತೆ ಮಣಿಪುರದ ಒಟ್ಟು ಮತದಾರರಲ್ಲಿ 10,349 (ಶೇ. 0.6) ಜನರು ನೋಟಾ ಆಯ್ಕೆ ಮಾಡಿಕೊಂಡಿದ್ದರೆ, ಗೋವಾದಲ್ಲಿ 10,629 ಮತದಾರರು (ಶೇ. 1.1), ಉತ್ತರಾಖಂಡದಲ್ಲಿ 46,830 (ಶೇ. 0.9), ಪಂಜಾಬ್‌ನಲ್ಲಿ 1,10,308 ಮತದಾರರು (ಶೇ. 0.9) ನೋಟಾ ಆಯ್ಕೆ ಮಾಡಿಕೊಂಡಿದ್ದಾರೆ.
ಈ ಮೂಲಕ ಒಟ್ಟು ಐದು ರಾಜ್ಯಗಳಲ್ಲಿ 7,99,302 ಮತದಾರರು ನೋಟಾ ಆಯ್ಕೆಯನ್ನು ಆರಿಸಿಕೊಂಡು ತಮ್ಮ ಹಕ್ಕು ಚಲಾಯಿಸಿದ್ದಾರೆ.