ನವದೆಹಲಿ:ಕೋವಿಡ್‌ನಿಂದಾಗಿ ಮುಖ್ಯ ಪರೀಕ್ಷೆಯನ್ನು ತಪ್ಪಿಸಿಕೊಂಡಿರುವ ಅಭ್ಯರ್ಥಿಗಳಿಗೆ ಹೆಚ್ಚುವರಿ ಪ್ರಯತ್ನಕ್ಕೆ ಅವಕಾಶ ನೀಡುವ ವಿಷಯವು ಅತ್ಯಂತ ಜಟಿಲವಾಗಿದೆ ಎಂದು ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್ಸಿ)ವು ಸೋಮವಾರ ಸರ್ವೋಚ್ಚ ನ್ಯಾಯಾಲಯಕ್ಕೆ ತಿಳಿಸಿತು.
ಕೋವಿಡ್‌ನಿಂದಾಗಿ ಮೂವರು ಅರ್ಜಿದಾರರ ಪೈಕಿ ಇಬ್ಬರು ಜ.7ರಿಂದ 16ರವರೆಗೆ ನಡೆದಿದ್ದ ಮುಖ್ಯಪರೀಕ್ಷೆಯಲ್ಲಿ ಆರಂಭದ ಕೆಲವು ಪೇಪರ್‌ಗಳನ್ನು ಬರೆದ ನಂತರ ಗೈರಾಗಿದ್ದರೆ,ಓರ್ವ ಅಭ್ಯರ್ಥಿಯು ಯಾವುದೇ ಪೇಪರ್ ಬರೆದಿರಲಿಲ್ಲ.
ಮುಖ್ಯ ಪರೀಕ್ಷೆಯ ಅವಧಿಯಲ್ಲಿ ಅಥವಾ ಅದಕ್ಕೆ ಮುನ್ನ ಕೋವಿಡ್ ಸೋಂಕಿಗೆ ತುತ್ತಾಗಿದ್ದ ಅಭ್ಯರ್ಥಿಗಳು ಪರೀಕ್ಷೆ ಬರೆಯುವಂತಾಗಲು ವ್ಯವಸ್ಥೆಗಳನ್ನು ಮಾಡುವ ಯಾವುದೇ ನೀತಿಯನ್ನು ಯುಪಿಎಸ್ಸಿ ಹೊಂದಿರಲಿಲ್ಲ ಎಂದೂ ಅರ್ಜಿದಾರರು ತಿಳಿಸಿದ್ದಾರೆ.
ನೀತಿಯ ಅನುಪಸ್ಥಿತಿ ಮತ್ತು ಕೋವಿಡ್ ಸೋಂಕಿತ ಅರ್ಜಿದಾರರು 2021ರ ನಾಗರಿಕ ಸೇವೆಗಳ ಮುಖ್ಯ ಪರೀಕ್ಷೆಗೆ ಹಾಜರಾಗಲು ವ್ಯವಸ್ಥೆಗಳನ್ನು ಮಾಡದಿರುವುದು ಸಂವಿಧಾನದ 14 ಮತ್ತು 16ನೇ ವಿಧಿಗಳಡಿ ಅರ್ಜಿದಾರರ ಹಕ್ಕನ್ನು ಉಲ್ಲಂಘಿಸಿದೆ ಎಂದು ಅರ್ಜಿಯಲ್ಲಿ ಪ್ರತಿಪಾದಿಸಲಾಗಿದೆ.
ವಿಷಯದಲ್ಲಿ ಸಲಹೆ ಪಡೆದುಕೊಳ್ಳಲು ಯುಪಿಎಸ್ಸಿ ವಕೀಲರು ಸಮಯಾವಕಾಶ ಕೋರಿದ ಬಳಿಕ ನ್ಯಾಯಮೂರ್ತಿಗಳಾದ ಎ.ಎಂ.ಖನ್ವಿಲ್ಕರ್ ಮತ್ತು ಸಿ.ಟಿ.ರವಿಕುಮಾರ್ ಅವರನ್ನೊಳಗೊಂಡ ಪೀಠವು ಅರ್ಜಿಯ ವಿಚಾರಣೆಯನ್ನು ಮಾ.21ಕ್ಕೆ ಮುಂದೂಡಿತು. ಅರ್ಜಿಯ ಕುರಿತು ಅಫಿಡವಿಟ್‌ಗಳನ್ನು ಸಲ್ಲಿಸುವಂತೆಯೂ ಪೀಠವು ಸಂಬಂಧಿತ ಕಕ್ಷಿದಾರರಿಗೆ ಸೂಚಿಸಿತು.