ಮೀರತ್: ಉತ್ತರ ಪ್ರದೇಶದ ದೌರಾಲಾ ನಿಲ್ದಾಣದ ಬಳಿ ಸಹರಾನ್‌ಪುರದಿಂದ ದೆಹಲಿಗೆ ತೆರಳುತ್ತಿದ್ದ ರೈಲಿನ ಎರಡು ಬೋಗಿಗಳಲ್ಲಿ ಶನಿವಾರ ಬೆಂಕಿ ಕಾಣಿಸಿಕೊಂಡಿದ್ದು, ಅದೃಷ್ಟವಶಾತ್ ಪ್ರಯಾಣಿಕರು ಸ್ವಲ್ಪದರಲ್ಲೇ ಪಾರಾಗಿದ್ದಾರೆ. ಅನೇಕ ಪ್ರಯಾಣಿಕರು ರೈಲ್ವೆ ಸಿಬ್ಬಂದಿಯೊಂದಿಗೆ ಕೈಜೋಡಿಸಿ ಹೊತ್ತಿ ಉರಿಯುತ್ತಿದ್ದ ಎಂಜಿನ್‌ನಿಂದ ಉಳಿದ ಬೋಗಿಗಳನ್ನು ತ್ವರಿತವಾಗಿ ಎಳೆಯಲು ಸಹಾಯ ಮಾಡಿದ್ದಾರೆ.
ಬೆಳಗ್ಗೆ 5.30ಕ್ಕೆ ಸಹರಾನ್‌ಪುರದಿಂದ ದೆಹಲಿಗೆ ತೆರಳುತ್ತಿದ್ದ ರೈಲು ದೆಹಲಿಯಿಂದ ಸುಮಾರು 90 ಕಿಮೀ ದೂರದಲ್ಲಿರುವ ದೌರಾಲಾವನ್ನು ತಲುಪಿದಾಗ ಕಂಪಾರ್ಟ್‌ಮೆಂಟ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ.
ರೈಲು ಬೆಳಿಗ್ಗೆ 7.10 ಕ್ಕೆ ದೌರಾಲಾ ನಿಲ್ದಾಣವನ್ನು ತಲುಪುವ ವೇಳೆಗೆ ಎರಡು ಬೋಗಿಗಳು ಬೆಂಕಿಗಾಹುತಿಯಾಗಿದ್ದವು ಎಂದು ಮೀರತ್ ಸಿಟಿ ರೈಲು ನಿಲ್ದಾಣದ ಅಧೀಕ್ಷಕ ಆರ್ ಪಿ ಶರ್ಮಾ ಪಿಟಿಐಗೆ ತಿಳಿಸಿದ್ದಾರೆ.
ಈ ಬೋಗಿಗಳಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ. ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಅವರು ಹೇಳಿದ್ದಾರೆ.
ಬೆಂಕಿಯು ಸಾಮಾನ್ಯವಾಗಿ ಭಯ ಉಂಟುಮಾಡುತ್ತದೆ. ಆದರೆ ಈ ರೈಲಿನ ಪ್ರಯಾಣಿಕರು ದೊಡ್ಡ ದುರಂತವನ್ನು ತಪ್ಪಿಸಲು ಎಲ್ಲರೂ ಒಟ್ಟಾಗಿ ಹೊತ್ತಿ ಉರಿಯುತ್ತಿದ್ದ ಇಂಜಿನ್‌ನಿಂದ ಕೋಚ್‌ಗಳನ್ನು ಎಳೆಯಲು ರೈಲ್ವೆ ಸಿಬ್ಬಂದಿಗೆ ಸಹಾಯ ಮಾಡಿದ್ದಾರೆ.
ಬ್ಯಾಕ್‌ಪ್ಯಾಕ್‌ಗಳನ್ನು ಹೊತ್ತಿದ್ದ ಅನೇಕ ಪ್ರಯಾಣಿಕರು, ಉರಿಯುತ್ತಿರುವ ಭಾಗದಿಂದ ರೈಲಿನ ಉಳಿದ ಕೋಚ್‌ಗಳನ್ನು ಎಳೆದಿದ್ದು, ಈ ಘಟನೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.