ಕಾಸರಗೋಡು: ಕಾಞಂಗಾಡು-ಕಾಣಿಯೂರು ರೈಲ್ವೆ ಹಳಿ ನಿರ್ಮಾಣ ಯೋಜನೆಯನ್ನು ಶೀಘ್ರ ಕಾರ್ಯಗತಗೊಳಿಸುವಂತೆ ಕಾಸರಗೋಡು ಸಂಸದ ರಾಜ್‍ಮೋಹನ್ ಉಣ್ಣಿತ್ತಾನ್ ಲೋಕಸಭೆಯಲ್ಲಿ ಆಗ್ರಹಿಸಿದ್ದಾರೆ.
ರೈಲ್ವೆ ಬಜೆಟ್ ಸಂಬಂಧ ನಡೆದ ಚಚೆಯಲ್ಲಿ ಪಲ್ಗೊಂಡು ಅವರು ಮಾತನಾಡಿದರು. ಕಾಞಂಗಾಡು-ಕಾಣಿಯೂರು ರೈಲ್ವೆ ಹಳಿ ನಿರ್ಮಾಣ ಯೋಜನೆಗೆ ಕರ್ನಾಟಕ ಸರ್ಕಾರ ಸಮ್ಮತಿ ಪತ್ರ ನೀಡದಿರುವುದರಿಂದ ಯೋಜನೆ ವಿಳಂಬವಾಗುತ್ತಿದೆ. 2015ರಲ್ಲಿ ಯೋಜನೆಗೆ ಸಂಬಂಧಪಟ್ಟ ಇಂಜಿನಿಯರಿಂಗ್ ಸರ್ವೇ ಪೂರ್ತಿಗೊಂಡಿದ್ದರೂ, ಕೆಲವೊಂದು ತಾಂತ್ರಿಕ ಅಡಚಣೆಯಿಂದ ಹಳಿನಿರ್ಮಾಣ ಯೋಜನೆ ವಿಳಂಬವಾಗುತ್ತಿದೆ. ಯೋಜನೆ ಪೂರ್ತಿಗೊಂಡಲ್ಲಿ ಕಣ್ಣೂರು, ಕಾಞಂಗಾಡು ಭಾಗದಿಂದ ಮೈಸೂರು, ಬೆಂಗಳೂರು ತೆರಳುವುದು ಮತ್ತಷ್ಟು ಸಉಲಭವಾಗಲಿದೆ.ಕಾಞಂಗಾಡಿನಿಂದ ಬೆಂಗಳೂರಿಗೆ 348ಕಿ.ಮೀ ದೂರವಿದ್ದು, ಪ್ರಸಕ್ತ 10ತಾಸುಗಳ ಪ್ರಯಾಣ ಅಗತ್ಯವಿದೆ. ಯೋಜನೆ ಪೂರ್ತಿಗೊಂಡಾಗ ಈ ದೂರವನ್ನು ಆರು ತಾಸುಗಳಲ್ಲಿ ತಲುಪಬಹುದಾಗಿದೆ. ಧಾರ್ಮಿಕ ಕೇಂದ್ರವಾಗಿರುವ ಸುಬ್ರಹ್ಮಣ್ಯ, ಹಾಗೂ ಸಾಂಸ್ಕøತಿಕ ನಗರ ಮೈಸೂರನ್ನು ಉತ್ತರ ಕೇರಳದ ಪ್ರವಾಸಿಗರು ಹಾಗೂ ಭಕ್ತಾದಿಗಳಿಗೆ ಸುಲಭ ಹಾದಿ ಇದಾಗಲಿದೆ ಎಂದೂ ರಾಜ್‍ಮೋಹನ್ ಉಣ್ಣಿತ್ತಾನ್ ಮನವರಿಕೆ ಮಾಡಿದ್ದಾರೆ.
ಕೆ-ರೈಲಿಗೆ ಅನುಮತಿಯಿಲ್ಲ:
ಕೇರಳದ ಪ್ರತಿಷ್ಠಿತ ಯೋಜನೆಯಾದ ಕಾಸರಗೋಡು-ತಿರುವನಂತಪುರ ಸಿಲ್ವರ್ ಲೈನ್ ಯೋಜನೆಗೆ ಕೇಂದ್ರ ಸರ್ಕಾರ ಅನುಮತಿ ನೀಡಿಲ್ಲ ಎಂದು ಕೇಂದ್ರ ರಐಲ್ವೆ ಖಾತೆ ಸಚಿವ ಅಶ್ವಿನ್ ವೈಷ್ಣವ್ ಲೋಕಸಭೆಯಲ್ಲಿ ತಿಳಿಸಿದ್ದಾರೆ. ಕೇರಳದ ಸಂಸದ ಹೈಬಿ ಈಡನ್ ಅವರ ಪ್ರಶ್ನೆಗೆ ಉತ್ತರಿಸಿ ಈ ಮಾಹಿತಿ ನೀಡಿದ್ದಾರೆ. ಪ್ರಕೃತಿ-ಪರಿಸರಕ್ಕೆ ಭಾರಿ ಹಾನಿ ತಂದೊಡ್ಡಬಹುದಾದ ಯೋಜನೆ ಇದಾಗಿದ್ದು, ಈ ಬಗ್ಗೆ ಸಮಗ್ರ ಅಧ್ಯಯನ ನಡೆಸಿದ ನಂತರವಷ್ಟೆ ಅನುಮತಿ ವಿಚಾರ ಪರಿಗಣಿಸುವುದಾಗಿ ಸಚಿವರು ತಿಳಿಸಿದ್ದಾರೆ.