ಭಾರತೀಯ ನೌಕಾಪಡೆಯು ಶನಿವಾರ ತನ್ನ ಯುದ್ಧನೌಕೆಯಿಂದ ಬ್ರಹ್ಮೋಸ್ ದಾಳಿ ಕ್ಷಿಪಣಿಯ ದೂರವ್ಯಾಪ್ತಿಯ ಆವೃತ್ತಿಯ ಪರೀಕ್ಷಾರ್ಥ ಪ್ರಯೋಗವನ್ನು ಯಶಸ್ವಿಯಾಗಿ ನಡೆಸಿತು.
'ಪರೀಕ್ಷಾರ್ಥ ಪ್ರಯೋಗವು ಬ್ರಹ್ಮೋಸ್ ಕ್ಷಿಪಣಿಯ ದೂರವ್ಯಾಪ್ತಿ ನಿಖರ ದಾಳಿಯ ಸಾಮರ್ಥ್ಯವನ್ನು ಮೌಲ್ಯೀಕರಿಸಿದೆ.
ವಿಶ್ವದಲ್ಲಿ ಅತ್ಯಂತ ಮಾರಕ ಕ್ಷಿಪಣಿಗಳಲ್ಲೊಂದಾಗಿರುವ ಬ್ರಹ್ಮೋಸ್‌ನ ಪರೀಕ್ಷಾರ್ಥ ಪ್ರಯೋಗವನ್ನು ನೌಕಾಪಡೆಯು ನಿಯಮಿತವಾಗಿ ನಡೆಸುತ್ತಿರುತ್ತದೆ. ನವಂಬರ್ 2017ರಲ್ಲಿ ಆಗಸದಿಂದ ಉಡಾಯಿಸುವ ಬ್ರಹ್ಮೋಸ್ ಆವೃತ್ತಿಯ ಯಶಸ್ವಿ ಪರೀಕ್ಷಾರ್ಥ ಪ್ರಯೋಗವನ್ನು ಸುಖೋಯ್-30 ಎಂಕೆಐ ಯುದ್ಧವಿಮಾನದಿಂದ ನಡೆಸಲಾಗಿತ್ತು.
ಶಬ್ದಾತೀತ ವೇಗದಿಂದ ಸಾಗುವ ಬ್ರಹ್ಮೋಸ್ ಕ್ಷಿಪಣಿಯನ್ನು ಛೇದಿಸುವುದು ವಿಶ್ವಾದ್ಯಂತದ ಪ್ರಮುಖ ಯುದ್ಧನೌಕೆಗಳಲ್ಲಿ ನಿಯೋಜಿಸಲಾಗಿರುವ ಮೇಲ್ಮೈನಿಂದ ಆಗಸಕ್ಕೆ ಚಿಮ್ಮುವ ಕ್ಷಿಪಣಿಗಳಿಗೆ ಸುಲಭವಲ್ಲ.
2006ರ ಬಳಿಕ ಬ್ರಹ್ಮೋಸ್ ಕ್ಷಿಪಣಿಗಳನ್ನು ವಾಯುಪಡೆ ಮತ್ತು ಸೇನೆಯಲ್ಲಿ ಸೇರ್ಪಡೆಗೊಳಿಸಲಾಗಿದೆ. ನಿಧಾನವಾಗಿ ಚಲಿಸುವ ಯುದ್ಧನೌಕೆಗಳಿಗಿಂತ ಭಿನ್ನವಾಗಿ ವೇಗವಾಗಿ ಚಲಿಸುವ ಸುಖೋಯ್ ಯುದ್ಧವಿಮಾನಗಳು ಕ್ಷಿಪಣಿಯನ್ನು ಪ್ರಯೋಗಿಸುವ ಮುನ್ನವೇ ಗುರಿಯತ್ತ ಕನಿಷ್ಠ 1,500 ಕೀ.ಮೀ.ಗಳಷ್ಟು ಸಾಗಿರುತ್ತವೆ ಮತ್ತು ನಂತರ ಕ್ಷಿಪಣಿಯು ಗುರಿಯನ್ನು ಅಪ್ಪಳಿಸಲು ಇನ್ನೂ 400 ಕಿ.ಮೀ.ಗಳಷ್ಟು ಮುಂದಕ್ಕೆ ಚಲಿಸುತ್ತದೆ. ಹೀಗಾಗಿ ಬ್ರಹ್ಮೋಸ್‌ನ ಆಗಸದಿಂದ ಉಡಾಯಿಸುವ ಆವೃತ್ತಿಯು ಹೆಚ್ಚು ವೈಶಿಷ್ಟಪೂರ್ಣವಾಗಿದೆ.