ಕೀವ್: ಯುದ್ಧಪೀಡಿತ ರಾಷ್ಟ್ರ ಉಕ್ರೇನ್ ನಿಂದ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ತಾಯ್ನಾಡಿಗೆ ಕರೆದುಕೊಂಡು ಬರಲು ಕೇಂದ್ರ ಸರ್ಕಾರ ಹರಸಾಹಸಪಡುತ್ತಿದ್ದು, ಈ ನಡುವಲ್ಲೇ ಉಕ್ರೇನ್ ಸೇನೆ ಭಾರತೀಯ ವಿದ್ಯಾರ್ಥಿಗಳನ್ನು ಒತ್ತೆ ಇರಿಸಿಕೊಂಡಿದ್ದು, ಮಾನವ ಗುರಾಣಿಯಾಗಿ ಬಳಸಿಕೊಳ್ಳುತ್ತಿದೆ ಎಂದು ರಷ್ಯಾ ಗಂಭೀರ ಆರೋಪ ಮಾಡಿದೆ.
ಉಕ್ರೇನ್ ಸೇನೆ ಭಾರತೀಯ ವಿದ್ಯಾರ್ಥಿಗಳನ್ನು ಒತ್ತೆಯಾಳಾಗಿರಿಸಿಕೊಂಡಿದೆ ಎಂದು ರಷ್ಯಾ ರಕ್ಷಣಾ ಸಚಿವಾಲಯ ಆರೋಪ ಮಾಡಿದೆ.
ಖಾರ್ಕೀವ್ನಲ್ಲಿ ಭಾರತೀಯ ವಿದ್ಯಾರ್ಥಿಗಳನ್ನು ಒತ್ತೆಯಾಳುಗಳನ್ನಾಗಿ ಇಡಲಾಗಿದೆ. ದಾಳಿ ತೀವ್ರವಾಗಿರುವ ಖಾರ್ಕೀವ್ನಲ್ಲಿರುವ ಭಾರತೀಯರನ್ನು ಅಲ್ಲಿಂದ ಸ್ಥಳಾಂತರ ಮಾಡಲು ರಷ್ಯಾ ಮುಂದಾದಾಗ, ಉಕ್ರೇನ್ ಸೇನೆ ಅವರನ್ನು ತಡೆಯಿತು ಮತ್ತು ವಾಪಸ್ ಕರೆದುಕೊಂಡುಹೋಗಿ ಒತ್ತೆಯಾಳುಗಳನ್ನಾಗಿ ಇಟ್ಟುಕೊಂಡಿತು ಎಂದು ತಿಳಿಸಿದೆ.
ಖಾರ್ಕೀವ್ನಲ್ಲಿರುವ ಭಾರತೀಯ ವಿದ್ಯಾರ್ಥಿಗಳು ಅಲ್ಲಿಂದ ರಷ್ಯಾದ ಬೆಲ್ಗೊರೊಡ್ಗೆ ಹೋಗಲು ಇಚ್ಛಿಸಿದ್ದರು. ಅಲ್ಲಿಂದ ಭಾರತಕ್ಕೆ ಮರಳಲು ಸಾಧ್ಯವಾಗುತ್ತಿತ್ತು. ಆದರೆ ಅವರೆಲ್ಲರನ್ನೂ ಉಕ್ರೇನ್ ವಶಕ್ಕೆ ಪಡೆಯಿತು ಎಂದು ರಷ್ಯಾ ರಕ್ಷಣಾ ಸಚಿವಾಲಯದ ಮೇಜರ್ ಜನರಲ್ ಇಗೋರ್ ಕೊನಾಶೆಂಕೋವ್ ಆರೋಪಿಸಿದ್ದಾರೆ.
ರಷ್ಯಾ ಆರೋಪಕ್ಕೆ ಉಕ್ರೇನ್ ಕೂಡ ಪ್ರತ್ಯಾರೋಪ ಮಾಡಿದ್ದು, ರಷ್ಯಾ ಸೇನೆ ಭಾರತ, ಪಾಕಿಸ್ತಾನ, ಚೀನಾ ಮತ್ತು ಇನ್ನಿತರ ದೇಶಗಳ ವಿದ್ಯಾರ್ಥಿಗಳನ್ನು ಸೆರೆಯಾಳಗಳನ್ನಾಗಿ ಇಟ್ಟುಕೊಂಡಿದೆ ಎಂದು ಹೇಳಿದೆ. ಉಕ್ರೇನ್ನ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಈ ಆರೋಪವನ್ನು ಮಾಡಿದೆ.
ನಿನ್ನೆಯಷ್ಟೇ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ದೂರವಾಣಿ ಕರೆಯಲ್ಲಿ ಮಾತುಕತೆ ನಡೆಸಿದ್ದು, ಅದರ ಬೆನ್ನಲ್ಲೇ ಈ ಆರೋಪ-ಪ್ರತ್ಯಾರೋಪಗಳು ಪ್ರಾರಂಭವಾಗಿವೆ.