ಲಖನೌ: ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಹೀನಾಯ ಸೋಲಿನ ನೈತಿಕ ಹೊಣೆ ಹೊತ್ತು ಉತ್ತರ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಅಜಯ್ ಕುಮಾರ್ ಲಲ್ಲು ಅವರು ಮಂಗಳವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ಹೀನಾಯ ಸೋಲು ಅನುಭವಿಸಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಉತ್ತರ ಪ್ರದೇಶ, ಉತ್ತರಾಖಂಡ, ಪಂಜಾಬ್, ಗೋವಾ ಮತ್ತು ಮಣಿಪುರ ಘಟಕಗಳ ಮುಖ್ಯಸ್ಥರಿಗೆ ರಾಜೀನಾಮೆ ನೀಡುವಂತೆ ಸೂಚಿಸಿದ ನಂತರ ಲಲ್ಲು ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಇತ್ತೀಚಿಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಎಲ್ಲಾ ಯುಪಿಸಿಸಿ ಪದಾಧಿಕಾರಿಗಳು ಶ್ರದ್ಧೆಯಿಂದ ಕೆಲಸ ಮಾಡಿ, ಗ್ರಾಮ ಮಟ್ಟದಲ್ಲೂ ಪಕ್ಷ ಸಂಘಟನೆಯನ್ನು ಕೊಂಡೊಯ್ಯಲಾಗಿದೆ. ನಾವು ಕಾಲಕಾಲಕ್ಕೆ ಸರ್ಕಾರದ ತಪ್ಪು ನೀತಿಗಳ ವಿರುದ್ಧ ಹೋರಾಡಿದ್ದೇವೆ” ಎಂದು ಉತ್ತರ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅಜಯ್ ಕುಮಾರ್ ಲಲ್ಲು ಅವರು ಸೋನಿಯಾ ಗಾಂಧಿ ಅವರಿಗೆ ಬರೆದ ರಾಜೀನಾಮೆ ಪತ್ರದಲ್ಲಿ ಹೇಳಿದ್ದಾರೆ.
ಆದರೆ ಈ ಚುನಾವಣೆಯಲ್ಲಿ ನಾವು ಅನಿರೀಕ್ಷಿತ ಸೋಲನ್ನು ಎದುರಿಸಬೇಕಾಯಿತು. ಈ ಸೋಲಿನ ನೈತಿಕ ಹೊಣೆ ಹೊತ್ತು ನಾನು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ ಎಂದು ಅವರು ತಿಳಿಸಿದ್ದಾರೆ.
"ನನ್ನಂತಹ ಸಾಮಾನ್ಯ ಕಾರ್ಯಕರ್ತನನ್ನು ನಂಬಿ ನೀವೆಲ್ಲರೂ ನನ್ನನ್ನು ಉತ್ತರ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ಮಾಡಿದ್ದೀರಿ. ಇದಕ್ಕಾಗಿ ನಾನು ನನ್ನ ಜೀವನದುದ್ದಕ್ಕೂ ಕೃತಜ್ಞನಾಗಿರುತ್ತೇನೆ. ನಾನು ಯಾವಾಗಲೂ ಪಕ್ಷಕ್ಕಾಗಿ ಸಂಪೂರ್ಣ ಶ್ರದ್ಧೆಯಿಂದ ಕೆಲಸ ಮಾಡುತ್ತೇನೆ" ಎಂದು ಲಲ್ಲು ಅವರು ರಾಜೀನಾಮೆ ಪತ್ರದಲ್ಲಿ ಬರೆದಿದ್ದಾರೆ.