ಟೋಕಿಯೊ: ಉತ್ತರ ಕೊರಿಯಾ ಶನಿವಾರ ಬ್ಯಾಲಿಸ್ಟಿಕ್ ಕ್ಷಿಪಣಿಯನ್ನು ಕೊರಿಯನ್ ಪರ್ಯಾಯ ದ್ವೀಪದ ಪೂರ್ವದಲ್ಲಿ ಸಮುದ್ರದತ್ತ ಹಾರಿಸಿದೆ. ಈ ಬ್ಯಾಲಿಸ್ಟಿಕ್ ಕ್ಷಿಪಣಿಯ ಪರೀಕ್ಷಾರ್ಥ ಪರೀಕ್ಷೆಯನ್ನು ಪತ್ತೆಹಚ್ಚಿರುವುದಾಗಿ ದಕ್ಷಿಣ ಕೊರಿಯಾದ ಜಂಟಿ ಮುಖ್ಯಸ್ಥರು ತಿಳಿಸಿದ್ದಾರೆ.
ಇನ್ನೊಂದೆಡೆ ಜಪಾನ್ ಪ್ರಧಾನಿ ಕಚೇರಿಯೂ ಸಹ ಉತ್ತರ ಕೊರಿಯಾ ಬ್ಯಾಲಿಸ್ಟಿಕ್ ಕ್ಷಿಪಣಿ ಪರೀಕ್ಷೆ ನಡೆಸಿದೆ. ಕ್ಷಿಪಣಿ ಸುಮಾರು 300 ಕಿ.ಮೀ ಕ್ರಮಿಸಿದೆ ಎಂದು ಜಪಾನ್ ರಕ್ಷಣಾ ಸಚಿವ ನೊಬುವೊ ಕಿಶಿ ತಿಳಿಸಿದ್ದಾರೆ.
ಇದು ಈ ವರ್ಷದ ಒಂಬತ್ತನೇ ಕ್ಷಿಪಣಿ ಪರೀಕ್ಷೆಯಾಗಿದೆ. ಇದಕ್ಕೂ ಮೊದಲು ಕ್ಷಿಪಣಿಯನ್ನು ಜನವರಿ 29 ಹಾಗೂ ಫೆಬ್ರವರಿ 27 ರಂದು ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಪರೀಕ್ಷಿಸಿದ್ದರು.
ಶಂಕಿತ ಬ್ಯಾಲಿಸ್ಟಿಕ್ ಕ್ಷಿಪಣಿಯನ್ನು ಪ್ಯೊಂಗ್ಯಾಂಗ್‌ನ ಸುನಾನ್ ಪ್ರದೇಶದಿಂದ ಪೂರ್ವಕ್ಕೆ ಕೊರಿಯನ್ ಪರ್ಯಾಯ ದ್ವೀಪ ಮತ್ತು ಜಪಾನ್‌ಗಳನ್ನು ಬೇರ್ಪಡಿಸುವ ಸಮುದ್ರದ ಮೇಲೆ ಉಡಾಯಿಸಲಾಗಿದೆ. ಬ್ಯಾಲಿಸ್ಟಿಕ್ ಮಿಸೈಲ್ ಪರೀಕ್ಷೆ ಪ್ಯೊಂಗ್ಯಾಂಗ್‌ನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಿರುವ ಸುನಾನ್ ಪ್ರದೇಶದಿಂದ ನಡೆದಿದೆ ಎಂದು ದಕ್ಷಿಣ ಕೊರಿಯಾ ಅಧಿಕಾರಿಗಳು ದೃಢಪಡಿಸಿದ್ದಾರೆ.
ಫೆಬ್ರವರಿ 27 ರಂದು ನಡೆದ ಕ್ಷಿಪಣಿ ಪರೀಕ್ಷೆಯೂ ಸಹ ಇದೇ ಸ್ಥಳದಲ್ಲಿ ನಡೆದಿತ್ತು. ಕ್ಷಿಪಣಿ ಪರೀಕ್ಷೆ ಬಳಿಕ ದಕ್ಷಿಣ ಕೊರಿಯಾ ತೀವ್ರ ಕಳವಳ ವ್ಯಕ್ತಪಡಿಸಿದ್ದು, ರಾಷ್ಟ್ರೀಯ ಭದ್ರತಾ ಮಂಡಳಿ ತುರ್ತು ಸಭೆ ನಡೆಸಲಿದೆ.
ದಕ್ಷಿಣ ಕೊರಿಯಾದಲ್ಲಿ ಅಧ್ಯಕ್ಷೀಯ ಚುನಾವಣೆ
ಮಾರ್ಚ್ 09ರಂದು ದಕ್ಷಿಣ ಕೊರಿಯಾದಲ್ಲಿ ಅಧ್ಯಕ್ಷೀಯ ಚುನಾವಣೆ ನಡೆಯಲಿದೆ. ದಕ್ಷಿಣ ಕೊರಿಯಾದಲ್ಲಿನ ಅಧ್ಯಕ್ಷೀಯ ಚುನಾವಣೆಯ ಮೇಲೆ ಪ್ರಭಾವ ಬೀರಲು ಉತ್ತರ ಕೊರಿಯಾ ಪ್ರಯತ್ನಿಸುತ್ತಿದೆ. ಈ ಹಿನ್ನೆಲೆಯಲ್ಲಿ ಈ ಪರೀಕ್ಷೆಯನ್ನು ಉತ್ತರ ಕೊರಿಯಾ ನಡೆಸಿದೆ ಎಂಬುದು ತಜ್ಞರ ಅಭಿಪ್ರಾಯ.