ಐಜ್ವಾಲ್: ಮೂರು ತಿಂಗಳ ಬಳಿಕ ಮಿಜೋರಾಂನಲ್ಲಿ ಆಫ್ರಿಕನ್ ಹಂದಿ ಜ್ವರ (ಎಎಸ್‌ಎಫ್) ಪ್ರಕರಣ ಪತ್ತೆಯಾಗಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಹಂದಿ ಜ್ವರದಿಂದಾಗಿ ಕಳೆದ ವರ್ಷ 33 ಸಾವಿರ ಹಂದಿಗಳು ರಾಜ್ಯದಲ್ಲಿ ಸಾವಿಗೀಡಾಗಿದ್ದವು.
ರಾಜ್ಯದ ಮುಖ್ಯ ಕಾರ್ಯದರ್ಶಿ ರೇಣು ಶರ್ಮಾ ಅವರೊಂದಿಗೆ ಬುಧವಾರ ನಡೆಯಲಿರುವ ಸಭೆಯ ಬಳಿಕ ರಾಜ್ಯದಲ್ಲಿ ಹೊಸ ಎಎಸ್‌ಎಫ್‌ನಿಂದಾಗಿ ಎಷ್ಟು ಹಂದಿಗಳು ಸಾವಿಗೀಡಾಗಿವೆ ಎಂಬುದನ್ನು ಅಧಿಕೃತವಾಗಿ ಹೇಳಲಾಗುತ್ತದೆ ಎಂದು ತಿಳಿಸಿದ್ದಾರೆ.
ಪೂರ್ವ ಮಿಜೋರಾಂನ ಚಂಫೈ ಪಟ್ಟಣದಲ್ಲಿ ಇತ್ತೀಚೆಗಷ್ಟೇ ಕೆಲವು ಹಂದಿಗಳು ಎಎಸ್‌ಎಫ್‌ನಿಂದಾಗಿ ಮೃತಪಟ್ಟಿದ್ದವು. ಚಂಫೈ ನೆರೆಯ ಎಲೆಕ್ಟ್ರಿಕ್ ವೆಂಗ್‌ನಲ್ಲಿ ಹಂದಿಗಳು ಮೃತಪಟ್ಟಿದ್ದರಿಂದ ಮಾರ್ಚ್ 21 ರಿಂದ ಮುಂದಿನ ಆದೇಶದವರೆಗೆ ಕಂಟೈನ್‌ಮೆಂಟ್ ಪ್ರದೇಶವೆಂದು ಘೋಷಿಸಲಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಿದೆ.
ಮಿಜೋರಾಂ-ಮಣಿಪುರ ಗಡಿಯ ಸಕವರ್ದೈ ಗ್ರಾಮದಲ್ಲಿಯೂ ಎಎಸ್‌ಎಫ್‌ನಿಂದ ಹಂದಿ ಮೃತಪಟ್ಟಿದೆ.
ಕಳೆದ ಡಿಸೆಂಬರ್‌ನಿಂದೀಚೆಗೆ ಮಿಜೋರಾಂನಲ್ಲಿ ಎಎಸ್‌ಎಫ್ ಸಂಬಂಧಿತ ಪ್ರಕರಣಗಳು ವರದಿಯಾಗಿರಲಿಲ್ಲ.