ಜಮ್ಮು: ಕೇಂದ್ರ ಗೃಹ ಸಚಿವ ಅಮಿತ್ ಶಾ ಇಂದು ಜಮ್ಮು ಮತ್ತು ಕಾಶ್ಮೀರದ ಭದ್ರತಾ ಪರಿಸ್ಥಿತಿಯನ್ನು ಪರಿಶೀಲಿಸಿದ್ದು ಇದೇ ವೇಳೆ ಭಯೋತ್ಪಾದಕರ ವಿರುದ್ಧ ಸಕ್ರಿಯ ಕಾರ್ಯಾಚರಣೆ ನಡೆಸುವಂತೆ ಆದೇಶಿಸಿದ್ದಾರೆ.
ಇದರ ಜೊತೆಗೆ ಲಾಜಿಸ್ಟಿಕ್ ಮತ್ತು ಹಣಕಾಸು ಬೆಂಬಲ ವ್ಯವಸ್ಥೆಯನ್ನು ಸ್ಥಗಿತಗೊಳಿಸುವುದರ ಕುರಿತು ಒತ್ತಿ ಹೇಳಿದರು. ಗಡಿಯಲ್ಲಿನ ಒಳನುಸುಳುವಿಕೆಯನ್ನು ಶೂನ್ಯವಾಗಿಸಲು ಭದ್ರತಾ ಗ್ರಿಡ್ ಅನ್ನು ಮತ್ತಷ್ಟು ಬಲಪಡಿಸಬೇಕು. ಶಾಂತಿಯುತ, ಸಮೃದ್ಧ ಜಮ್ಮು ಮತ್ತು ಕಾಶ್ಮೀರ ನರೇಂದ್ರ ಮೋದಿಯವರ ಕನಸಾಗಿದ್ದು ಭಯೋತ್ಪಾದನೆಯನ್ನು ಸಂಪೂರ್ಣವಾಗಿ ತೊಡೆದುಹಾಕಬೇಕು ಎಂದು ಶಾ ಹೇಳಿದರು.
ಎರಡು ದಿನಗಳ ಜಮ್ಮು ಮತ್ತು ಕಾಶ್ಮೀರ ಪ್ರವಾಸದಲ್ಲಿರುವ ಅಮಿತ್ ಶಾ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಮಚ್ಚು ಜಮ್ಮು ಮತ್ತು ಕಾಶ್ಮೀರ ಆಡಳಿತದ ಹಿರಿಯ ಅಧಿಕಾರಿಗಳೊಂದಿಗೆ ಭದ್ರತಾ ಪರಿಸ್ಥಿತಿಯನ್ನು ಪರಿಶೀಲಿಸಿದ್ದಾರೆ ಎಂದು ಅಧಿಕೃತ ವಕ್ತಾರರು ತಿಳಿಸಿದ್ದಾರೆ.
2018ರಲ್ಲಿ 417 ಭಯೋತ್ಪಾದಕ ದಾಳಿಗಳಾಗಿದ್ದು 2021ರಲ್ಲಿ 229ಕ್ಕೆ ಇಳಿಸಲಾಗಿದೆ. 2018ರಲ್ಲಿ 91 ಭದ್ರತಾ ಪಡೆಗಳನ್ನು ಹತ್ಯೆ ಮಾಡಲಾಗಿದ್ದು 2021ರ ವೇಳೆ ಅದು ಕೇವಲ 42ಕ್ಕೆ ಇಳಿಕೆಯಾಗಿರುವುದಕ್ಕೆ ಶಾ ಅಧಿಕಾರಿಗಳನ್ನು ಶ್ಲಾಘಿಸಿದರು.
ಡ್ರಗ್ಸ್ ಭಯೋತ್ಪಾದನೆಯನ್ನು ಎದುರಿಸಲು ಜಮ್ಮು ಮತ್ತು ಕಾಶ್ಮೀರದಲ್ಲಿ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ(ಎನ್‌ಸಿಬಿ) ಅನ್ನು ಇನ್ನಷ್ಟು ಬಲಪಡಿಸಲು ಸಚಿವರು ಆದೇಶಿಸಿದರು ಎಂದು ವಕ್ತಾರರು ತಿಳಿಸಿದ್ದಾರೆ.