ಕುಂಬಳೆ : ಕಾಸರಗೋಡು ತಾಲೂಕು ಭಜನಾ ಅಭಿಮಾನ-ಅಭಿಯಾನ ಎಂಬ ಕಾರ್ಯಕ್ರಮದ ಅಂಗವಾಗಿ 2021-22ನೇ ವರ್ಷ ಪಯರ್ಂತ ವಾರ ವಾರ ಮನೆ,ಮಂದಿರ, ಮಠಗಳಲ್ಲಿ ಜರಗುವ ತಿಂಗಳ ಕಾರ್ಯಕ್ರಮ ಕುಂಬಳೆ ಸೀಮೆಯ ಪ್ರಸಿದ್ದ ನಾಲ್ಕು ಕ್ಷೇತ್ರಗಳಲ್ಲಿ ಒಂದಾದ ಕಣಿಪುರ ಶ್ರೀಗೋಪಾಲಕೃಷ್ಣ ದೇವಸ್ಥಾನದಲ್ಲಿ ನಡೆಯುವ ಮೂಲಕ ಭಜಕರ ಸಂಗಮಕ್ಕೆ ಸಾಕ್ಷಿಯಾಯಿತು. ಜಿಲ್ಲೆಯ ಪ್ರಸಿಧ್ಧ ಕ್ಷೇತ್ರಗಳಲ್ಲಿ ನಡೆಸಿಕೊಂಡು ಬರುವ 4ನೇ ಕಾರ್ಯಕ್ರಮ ಇದಾಗಿದೆ. ಕುಂಬಳೆ ಸೀಮೆಯ ಮಧೂರು,ಅಡೂರು,ಮುಜುಂಗಾವು ಕ್ಷೇತ್ರಗಳಲ್ಲಿ ಜರಗಿತ್ತು.
ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ಹಾಗೂ ಕಣಿಪುರ ಕ್ಷೇತ್ರ ಆಡಳಿತ, ಜೀರ್ಣೋದ್ಧಾರ ಸಮಿತಿ ಸಹಯೋಗದಲ್ಲಿ ನಡೆದ ಕಾರ್ಯಕ್ರಮವು ದೀಪ ಪ್ರಜ್ವಲನೆಯೊಂದಿಗೆ ಆರಂಭಗೊಂಡಿತು. ಬಳಿಕ ವಿವಿಧ ಭಜನಾ ಸಂಘಗಳಿಂದ ಭಜನೆ ಜರಗಿತು. ಕಾರ್ಯಕ್ರಮದಂಗವಾಗಿ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಆಶೀರ್ವಚನ ನೀಡಿದರು. ಭಜನೆ ಭಕ್ತಿಯ ಜತೆಗೆ ಬದುಕಿಗೆ ಸಂಸ್ಕಾರ ಒದಗಿಸುತ್ತದೆ. ಕಷ್ಟದಲ್ಲೂ ಇಷ್ಟದಲ್ಲೂ ಭಗವಂತನ ಸಾಕ್ಷತ್ಕಾರಕ್ಕೆ ಭಜನೆಯೊಂದೆ ದಾರಿ. ಅದನ್ನು ಜನ ಮಾನಸಗೊಳಿಸುವಲ್ಲಿ ನೀಡುವ ಕೊಡುಗೆ ಪ್ರಶಸಂನೀಯ ಎಂದು ಶ್ರೀಗಳು ತಿಳಿಸಿದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಧಾರ್ಮಿಕ ಮುಂದಾಳು, ಭಜನಾ ಪರಿಷತ್ ಕಾಸರಗೋಡು ವಲಯಾಧ್ಯಕ್ಷ ಕೆ.ಎನ್. ವೆಂಕಟ್ರಮಣ ಹೊಳ್ಳ ಕಾಸರಗೋಡು ಮಾತನಾಡಿ, ಗುರು ಮಾರ್ಗದರ್ಶನದಲ್ಲಿ ಸಾಮಾಜಿಕ ಸಮಷ್ಠಿಗೆ ಈ ಅಭಿಯಾನವೊಂದು ಅಳಿಲ ಸೇವೆಯಷ್ಟೆ. ಭವಿಷ್ಯತ್ತಿನ ಜಗತ್ತಿನಲ್ಲಿ ಇದೊಂದು ಮೈಲುಗಲ್ಲಾಗಬೇಕಾದರೆ ಸರ್ವರ ಸಹಕಾರ ಅತ್ಯಗತ್ಯ. ಆದ್ದರಿಂದ ಧರ್ಮ ಜಾಗೃತಿಯ ಇಂತಹ ಕಾರ್ಯದಲ್ಲಿ ಎಲ್ಲರೂ ತೊಡಗಿಸಿಕೊಳ್ಳಬೇಕಾಗಿದೆ ಎಂದರು. ಸಭೆಯಲ್ಲಿ ದಾಸ ಸಂಕೀರ್ತನಕಾರ, ಭಜನಾ ಅಭಿಯಾನದ ಗೌರವಾಧ್ಯಕ್ಷ ಮದ್ವಾಧೀಶ ವಿಠಲದಾಸ ರಾಮಕೃಷ್ಣ ಕಾಟುಕುಕ್ಕೆ ಹಾಗೂ ಹರಿದಾಸ
ಜಯಾನಂದ ಕುಮಾರ್ ಹೊಸದುರ್ಗ, ಕಲಾರತ್ನ ಶಂನಾಡಿಗ ಕುಂಬಳೆ, ಧ.ಗ್ರಾ.ಯೋಜನಾ ಮೇಲ್ವಿಚಾರಕ ರಮೇಶ್, ಕ್ಷೇತ್ರ ಪ್ರಬಂಧಕ ರಾಜಶೇಖರ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಬಿ.ರಘನಾಥ ಪೈ ಮೊದಲಾದವರು ಮಾತನಾಡಿದರು.ಪ್ರೇಮಾವತಿ ಸ್ವಾಗತಿಸಿ ವಿದ್ಯಾ ಪೈ ವಂದಿಸಿದರು.
ಬಳಿಕ ಶ್ರೀಶಕ್ತಿ ಮಕ್ಕಳ ಭಜನಾ ತಂಡ ಉಳಿಯತ್ತಡ್ಕ ಅವರಿಂದ ಕುಣಿತ ಭಜನೆ ಹಾಗೂ ಸಾಮೂಹಿಕ ಭಜನೆ ಜರಗಿತು.