ನವದೆಹಲಿ :ಆನ್‌ಲೈನ್‌ನಲ್ಲಿ ತಮ್ಮ ಬಗ್ಗೆ ಕೂಡಲೇ ಮಾಹಿತಿಗಳನ್ನು ಸಲ್ಲಿಸುವಂತೆ ಉಕ್ರೇನ್‌ನಲ್ಲಿಯ ಭಾರತೀಯ ರಾಯಭಾರ ಕಚೇರಿಯು ಯುದ್ಧಗ್ರಸ್ತ ದೇಶದಲ್ಲಿ ಸಿಕ್ಕಿಹಾಕಿಕೊಂಡಿರುವ ಎಲ್ಲ ಭಾರತೀಯ ವಿದ್ಯಾರ್ಥಿಗಳಿಗೆ ರವಿವಾರ ಸೂಚಿಸಿದೆ.
ತಮ್ಮ ವೈಯಕ್ತಿಕ ಮಾಹಿತಿಗಳು ಮತ್ತು ತಾವು ಸಿಕ್ಕಿಕೊಂಡಿರುವ ನಗರವನ್ನು ನಿಗದಿತ ನಮೂನೆಯಲ್ಲಿ ಉಲ್ಲೇಖಿಸುವಂತೆ ವಿದ್ಯಾರ್ಥಿಗಳಿಗೆ ಸೂಚಿಸಲಾಗಿದೆ.
ಈಗಲೂ ಉಕ್ರೇನ್‌ನಲ್ಲಿರುವ ಎಲ್ಲ ಭಾರತೀಯ ಪ್ರಜೆಗಳು ಲಗತ್ತಿಸಲಾದ ಗೂಗಲ್ ಶೀಟ್‌ನಲ್ಲಿ ತಮ್ಮೆಲ್ಲ ವಿವರಗಳನ್ನು ತುರ್ತಾಗಿ ತುಂಬುವಂತೆ ಕೋರಿಕೊಳ್ಳಲಾಗಿದೆ ಎಂದು ಟ್ವೀಟಿಸಿರುವ ರಾಯಭಾರ ಕಚೇರಿಯು,'ಸುರಕ್ಷಿತರಾಗಿರಿ,ಧೈರ್ಯದಿಂದಿರಿ 'ಎಂದು ಹಾರೈಸಿದೆ.
ಹೆಸರು,ಇ-ಮೇಲ್,ಫೋನ್ ನಂಬರ್,ಹಾಲಿ ವಾಸ್ತವ್ಯದ ವಿಳಾಸ,ಪಾಸ್ಪೋರ್ಟ್ ವಿವರಗಳು,ಲಿಂಗ,ವಯಸ್ಸು ಇತ್ಯಾದಿಗಳನ್ನು ಗೂಗಲ್ ಶೀಟ್‌ನಲ್ಲಿ ಕೋರಲಾಗಿದೆ. ಉಕ್ರೇನ್‌ನಲ್ಲಿ ಸಿಕ್ಕಿಹಾಕಿಕೊಂಡಿರುವ ಭಾರತೀಯರು ಹಾಲಿ ಇರುವ ಸ್ಥಳವನ್ನೂ ಸೂಚಿಸುವಂತೆ ರಾಯಭಾರ ಕಚೇರಿಯು ಸೂಚಿಸಿದೆ.
ಖಾರ್ಕಿವ್, ಖೆರ್ಸನ್, ಕೀವ್, ಲಿವ್ಯ,ಲುಹಾಂಸ್ಕ್, ಒಡೆಸಾ, ಸುಮಿ ಸೇರಿದಂತೆ 24ಕ್ಕೂ ಅಧಿಕ ವಿವಿಧ ಸ್ಥಳಗಳ ಪಟ್ಟಿಯನ್ನು ಶೀಟ್‌ನಲ್ಲಿ ಒದಗಿಸಲಾಗಿದ್ದು, ಭಾರತೀಯರು ತಾವಿರುವ ಸ್ಥಳವನ್ನು ಆಯ್ಕೆ ಮಾಡಬಹುದಾಗಿದೆ.
ಈ ನಡುವೆ ಹಂಗೆರಿಯಲ್ಲಿಯ ಭಾರತೀಯ ರಾಯಭಾರಿ ಕಚೇರಿಯು ರವಿವಾರ ಭಾರತೀಯರನ್ನು ತೆರವುಗೊಳಿಸಲು 'ಆಪರೇಷನ್ ಗಂಗಾ'ದ ಕೊನೆಯ ಹಂತದ ಕಾರ್ಯಾಚರಣೆಯನ್ನು ನಡೆಸಿದೆ. ಸ್ಥಳೀಯ ಕಾಲಮಾನ ಬೆಳಿಗ್ಗೆ 10ರಿಂದ ಮಧ್ಯಾಹ್ನ 12 ಗಂಟೆಯೊಳಗೆ ರಾಜಧಾನಿ ಬುಡಾಪೆಸ್ಟ್‌ನ ಹಂಗೆರಿಯಾ ಸಿಟಿ ಸೆಂಟರ್ ತಲುಪುವಂತೆ ಅಧಿಕಾರಿಗಳು ಭಾರತೀಯ ವಿದ್ಯಾರ್ಥಿಗಳಿಗೆ ಸೂಚಿಸಿದ್ದರು.
ತೆರವು ಕಾರ್ಯಾಚರಣೆಗಳಿಗೆ ಬೆಂಬಲಕ್ಕಾಗಿ ಭಾರತವು 150ಕ್ಕೂ ಅಧಿಕ ಸ್ವಯಂಸೇವಕರನ್ನು ಉಕ್ರೇನ್-ಹಂಗೆರಿ ಗಡಿಗೆ ರವಾನಿಸಿತ್ತು. ಭಾರತೀಯರ ತೆರವು ಪ್ರಯತ್ನಗಳ ಸಮನ್ವಯಕ್ಕಾಗಿ ರಾಯಭಾರ ಕಚೇರಿಯು ಬುಡಾಪೆಸ್ಟ್‌ನಲ್ಲಿ ನಿಯಂತ್ರಣ ಕೊಠಡಿಯನ್ನು ಸ್ಥಾಪಿಸಿದೆ.
ಭಾರತೀಯ ಪ್ರಜೆಗಳು ಉಕ್ರೇನ್‌ನಿಂದ ರಸ್ತೆಮಾರ್ಗವಾಗಿ ಗಡಿದಾಟು ಕೇಂದ್ರಗಳ ಮೂಲಕ ನೆರೆದೇಶಗಳಾದ ರೊಮೇನಿಯಾ,ಪೋಲಂಡ್, ಹಂಗೆರಿ ಮತ್ತು ಸ್ಲೊವಾಕಿಯಾಗಳನ್ನು ಪ್ರವೇಶಿಸಿದ ಬಳಿಕ ಭಾರತವು ಅವರನ್ನು ತಾಯ್ನೊಡಿಗೆ ಕರೆತರುತ್ತಿದೆ.