ಕೀವ್: ಯುದ್ಧ ಬಾಧಿತ ಉಕ್ರೇನ್ ನಲ್ಲಿರುವ ಭಾರತೀಯ ವಿದ್ಯಾರ್ಥಿಗಳ ಪಾಡು ಹೇಳತೀರದಾಗಿದೆ. ಉಕ್ರೇನ್ ನಲ್ಲಿರುವ ಭಾರತೀಯ ರಾಯಭಾರಿ ಅಧಿಕಾರಿಗಳಿಂದ ಯಾವುದೇ ರೀತಿಯ ನೆರವು ಸಿಗುತ್ತಿಲ್ಲ ಎಂದು ಗುಂಡೇಟಿನಿಂದ ಆಸ್ಪತ್ರೆಗೆ ದಾಖಲಾಗಿರುವ ಭಾರತೀಯ ವಿದ್ಯಾರ್ಥಿ ಹರ್ಜೊತ್ ಸಿಂಗ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇಲ್ಲಿಯವರೆಗೂ ಭಾರತೀಯ ರಾಯಭಾರಿಗಳಿಂದ ಯಾವುದೇ ನೆರವು ಸಿಕ್ಕಿಲ್ಲ. ಅವರಂದಿಗೆ ಸಂಪರ್ಕಕ್ಕೆ ಪ್ರಯತ್ನಿಸುತ್ತಿದ್ದೇನೆ. ಏನಾದರೂ ಮಾಡವುದಾಗಿ ಪ್ರತಿದಿನವೂ ಹೇಳ್ತಾರೆ, ಆದರೆ ಇಲ್ಲಿಯವರೆಗೂ ಯಾವುದೇ ನೆರವು ನೀಡಿಲ್ಲ ಎಂದು ಹರ್ಜೊತ್ ಸಿಂಗ್ ಹೇಳಿದ್ದಾರೆ. ಉಕ್ರೇನ್ ನಲ್ಲಿ ಬಹು ಸುತ್ತಿನ ಗುಂಡೇಟಿನಿಂದ ಹರ್ಜೊತ್ ಸಿಂಗ್ ಬಳಲುತ್ತಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಫೆಬ್ರವರಿ 27 ರಂದು ಈ ಘಟನೆ ಸಂಭವಿಸಿತು. ಕ್ಯಾಬ್ ವೊಂದರಲ್ಲಿ ಮೂವರು ಚೆಕ್ ಪೋಸ್ಟ್ ಕಡೆಗೆ ಬರುತ್ತಿದ್ದಾಗ ನಮ್ಮ ಕಾರಿನ ಮೇಲೆ ಗುಂಡಿನ ಸುರಿಮಳೆಗೈಯ್ಯಲಾಯಿತು. ಆದಕಾರಣ ತಾವು ಗಾಯಗೊಂಡಿರುವುದಾಗಿ ಹರ್ಜೊತ್ ಆಸ್ಪತ್ರೆಯಿಂದ ಎಎನ್ ಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
ಸಾವಿನ ನಂತರ ವಿಮಾನ ದೊರೆತರೆ ಅದಕ್ಕೆ ಯಾವುದೇ ಅರ್ಥವಿಲ್ಲ, ದೇವರು ನನಗೆ ಎರಡನೇ ಜೀವನ ಕೊಟ್ಟಿದ್ದು, ಅದರಿಂದ ನಾನು ಬದುಕುಳಿದಿದ್ದೇನೆ. ಇಲ್ಲಿಂದ ಸ್ಥಳಾಂತರ ಮಾಡುವಂತೆ ರಾಯಭಾರಿ ಅಧಿಕಾರಿಗಳ ಬಳಿ ಮನವಿ ಮಾಡುತ್ತೇನೆ. ವೀಲ್ಹ್ ಚೇರ್ ನಂತರ ಸೌಕರ್ಯ ಒದಗಿಸಿ ನೆರವಾಗುವಂತೆ ಅವರು ಕೇಳಿಕೊಂಡಿದ್ದಾರೆ.
ಉಕ್ರೇನ್ ರಾಷ್ಟ್ರ ತೊರೆಯುವಂತೆ ಭಾರತೀಯರಿಗೆ ಈಗಾಗಲೇ ರಾಯಭಾರಿ ಅಧಿಕಾರಿಗಳು ಸಲಹೆ ನೀಡಿದ್ದಾರೆ. ಯುದ್ಧದಲ್ಲಿ ಗನ್ ಬುಲೆಟ್ ಗಳು ಯಾವುದೇ ಧರ್ಮ, ರಾಷ್ಟ್ರೀಯತೆಯನ್ನು ನೋಡಲ್ಲ ಎಂದು ನಾಗರಿಕ ವಿಮಾನಯಾನ ರಾಜ್ಯ ಸಚಿವ ಜನರಲ್ ವಿಕೆ ಸಿಂಗ್ ಹೇಳಿದ್ದಾರೆ.