ಬದಿಯಡ್ಕ: ಜನಪದೀಯ ಮತ್ತು ಪುರಾಣಗಳ ಹಿನ್ನೆಗಳಲ್ಲಿ ಕಥೆ ಹೇಳುವ ಪರಂಪರೆ ನಮ್ಮಲ್ಲಿ ಬೆಳೆದುಬಂದಿದೆ. ಪ್ರತಿ ಕಾಲಘಟ್ಟದ ದಾಖಲೆಯ ಮಾಧ್ಯಮವಾಗಿ ಕಥಾ ಸಾಹಿತ್ಯ ಗಮನಾರ್ಹವಾಗಿದೆ. ಈ ನಿಟ್ಟಿನಲ್ಲಿ ಸಾಂಸ್ಕøತಿಕ ವಿನಿಮಯ ಸಹಿತ ಬಹು ಆಯಾಮಗಳ ನೆಲೆಯಲ್ಲಿ ಕೃತಿಗಳು ಭಾಷಾಂತರಗೊಳ್ಳಬೇಕು ಎಂದು ಹಿರಿಯ ಸಂಶೋಧಕ, ಸಾಹಿತಿ, ಕೋಝಿಕ್ಕೋಡ್ ನಲ್ಲಿ ಗ್ರಾಮಾಧಿಕಾರಿಯಾಗಿರುವ ಶಂಕರ್ ಕುಂಜತ್ತೂರು ಅವರು ತಿಳಿಸಿದರು.
ಸಮಾನ ಮನಸ್ಕರ ಬಳಗ ಬದಿಯಡ್ಕ ಇದರ ಆಶ್ರಯದಲ್ಲಿ ಭಾನುವಾರ ಶಾಸ್ತ್ರೀಸ್ ಕಂಪೌಂಡ್ ನ ಸೀತಾರಾಮ ಸಂಕೀರ್ಣದಲ್ಲಿ ನಡೆದ ಅನುವಾದ ಅನುಭವ ಮತ್ತು ಕತೆ-ಕರ್ತೃ ಸಂವಾದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪ್ರಾದೇಶಿಕ ಭಾಷಾ ವೈವಿಧ್ಯಗಳ ಸುಂದರ ಪ್ರತೀಕಗಳಾಗಿ ಕೃತಿಗಳು ಎಂದಿಗೂ ಮತ್ತೊಂದು ಕಾಲಕ್ಕೆ, ಬೇರೊಂದು ಭಾಷೆಗೆ ಸಂಶೋಧನೆಯ ನೂರಾರು ವಸ್ತುಗಳನ್ನು ಹುಟ್ಟುಹಾಕುತ್ತದೆ. ಈ ನಿಟ್ಟಿನಲ್ಲಿ ಕಥೆಗಾರ ವರ್ತಮಾನದಲ್ಲಿ ನಿಂತಿದ್ದರೂ, ಭೂತ-ಭವಿಷ್ಯಗಳ ಅರಿವಿನೊಂದಿಗೆ ವಿಶಾಲ ಭಾಷಾ ಸೌಂದರ್ಯ, ಸತ್ಯವನ್ನು ತೆರೆದಿಡುವ, ಕಾಲಘಟ್ಟದ ಸಂಸ್ಕøತಿ, ಬದುಕನ್ನು ಬಿಚ್ಚಿಡುವ ಕೃತಿಗಳನ್ನು ಸಾರಸ್ವತ ಲೋಕಕ್ಕೆ ನೀಡಿದಾಗ ಸಾರ್ಥಕತೆ ಮೂಡಿಬರುತ್ತದೆ ಎಂದು ಅವರು ಈ ಸಂದರ್ಭ ತಿಳಿಸಿದರು.
ಸಮಾರಂಭದಲ್ಲಿ ಸಾಹಿತಿ ಶಶಿ ಭಾಟಿಯಾ ಅವರ ಆನೆಬಾಗಿಲು ಕಥಾ ಸಂಕಲನದ ಮಲೆಯಾಳ ಅನುವಾದಕ ರಾಜನ್ ಮುನಿಯೂರು ಅವರು ಅನುವಾದ ಅನುಭವದ ಬಗ್ಗೆ ಮಾತನಾಡಿ, ಅನುವಾದವೆಂಬ ಸವಾಲಿನ ಹಾದಿ ಹೊಸ ಹುಟ್ಟಿನಷ್ಟು ಜಟಿಲವಾದುದು. ಮೂಲ ಸತ್ವಕ್ಕೆ ಧಕ್ಕೆಯಾಗದೆ ಸಮಗ್ರ ಭಾಷಾ ಫ್ರೌ|ಢಿಮೆಯೊಂದಿಗೆ ಭಾಷಾಂತರಕಾರ ವ್ಯಾಪಕ ಹುಡುಕಾಟದ ಶೋಧಕ ಮನಸ್ಸನ್ನು ಹುಯದಿಗಿಸಿರಬೇಕು ಎಂದರು.
ಬಳಿಕ ನಡೆದ ಕಥಾಗೋಷ್ಠಿಯಲ್ಲಿ ಪುರುಷೋತ್ತಮ ಭಟ್ ಕೆ, ಮೀನಾಕ್ಷಿ ಬೊಡ್ಡೋಡಿ ಹಾಗೂ ಮೇಘಶ್ರೀ ಪುತ್ತಿಗೆ ಸ್ವರಚಿತ ಕಥೆಗಳನ್ನು ವಾಚಿಸಿದರು. ಈ ಕಥೆಗಳ ಬಗ್ಗೆ ಶಿಕ್ಷಕಿಯರಾದ ಸರ್ವಮಂಗಳ ನಾಯ್ಕಾಪು ಹಾಗೂ ದಿವ್ಯಗಂಗಾ ಮುಳ್ಳೇರಿಯ ಅವರು ವಿಮರ್ಶೆ ನಡೆಸಿದರು. ನವ್ಯ ಶೈಲಿಯಲ್ಲಿ , ಗ್ರಾಮೀಣ ಬದುಕಿನ ನಿರೂಪಣೆಯೊಂದಿಗೆ ವರ್ತಮಾನದ ಸ್ಥಿತಿಗಳ ಮೇಲೆ ಬೆಳಕುಚೆಲ್ಲುವಲ್ಲಿ ಮೂರು ಕಥೆಗಳು ವಿಭಿನ್ನವಾಗಿ ಮೂಡಿಬಂದಿದೆ ಎಂದು ವಿಮರ್ಶಕರು ಈ ಸಂದರ್ಭ ಅಭಿಪ್ರಾಯಪಟ್ಟರು.
ಸಾಹಿತಿ ಶಶಿ ಭಾಟಿಯಾ ಉಪಸ್ಥಿತರಿದ್ದು ಮಾತನಾಡಿದರು. ಸಂಘಟಕರಾದ ಡಾ.ಶ್ರೀನಿಧಿ ಸರಳಾಯ ಬದಿಯಡ್ಕ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಜಯ ಮಣಿಯಂಪಾರೆ ಹಾಗೂ ಬಾಲಕೃಷ್ಣ ಬೇರಿಕೆ ಕಾರ್ಯಕ್ರಮ ನಿರೂಪಿಸಿದರು. ಸುಂದರ ಬಾರಡ್ಕ ವಂದಿಸಿದರು. ಈ ಸಂದರ್ಭ ಚಂದನ್, ತಸ್ಮೈ ಹಾಗೂ ರತ್ನಾಕರ ಓಡಂಗಲ್ಲು, ಸುಂದರ ಬಾರಡ್ಕ ಅವರಿಂದ ಕನ್ನಡ ಭಾವಗೀತೆಗಳ ಗಾಯನ ನಡೆಯಿತು.