ಉಕ್ರೇನ್ ಮೇಲೆ ರಷ್ಯಾ ನಡೆಸಿರುವ ದಾಳಿಯ ಕುರಿತಂತೆ ಅಮೇರಿಕಾ, ಐರೋಪ್ಯ ರಾಷ್ಟ್ರಗಳು ಸೇರಿದಂತೆ ಬಹುತೇಕ ಎಲ್ಲಾ ದೇಶಗಳು ಚರ್ಚೆ ನಡೆಸುತ್ತಿದೆ. ಐರೋಪ್ಯ ರಾಷ್ಟ್ರಗಳ ಒಕ್ಕೂಟದ ಸದಸ್ಯತ್ವ ಪಡೆದಿರುವ ಉಕ್ರೇನ್ ವಿರುದ್ಧದ ದಾಳಿಯ ಸುದ್ದಿ ಇಡೀ ಜಗತ್ತಿನ ಮಾಧ್ಯಮಗಳ ಮುಖ್ಯ ಸುದ್ದಿಯಾಗಿ ಮಾರ್ಪಟ್ಟಿದೆ.
ಉಕ್ರೇನಿಯನ್ ಯೋಧರನ್ನು ಸ್ವಾತಂತ್ರ್ಯ ಹೋರಾಟಗಾರರೆಂಬಂತೆ ವರದಿ ಮಾಡುತ್ತಿದ್ದು, ಉಕ್ರೇನಿಯನ್ ಯೋಧರ ಪರವಾಗಿ ಜನಾಭಿಪ್ರಾಯ ರೂಪುಗೊಳ್ಳುತ್ತಿದೆ. ಅದೇ, ವೇಳೆ ಇಸ್ರೇಲ್ ರಾಷ್ಟ್ರವು ಫೆಲೆಸ್ತೀನ್ ನಾಗರಿಕರ ಮೇಲೆ ನಡೆಸುತ್ತಿರುವ ದಾಳಿಗಳು, ದೌರ್ಜನ್ಯಗಳ ಕುರಿತು ಮಾಧ್ಯಮಗಳೇಕೆ ವರದಿ ಮಾಡುತ್ತಿಲ್ಲ? ಎಂದು ಸಾಮಾಜಿಕ ಮಾಧ್ಯಮದಲ್ಲಿ ನೆಟ್ಟಿಗರು ಪ್ರಶ್ನೆಗಳನ್ನು ಕೇಳಲಾರಂಭಿಸಿದ್ದಾರೆ. ಪುಟ್ಟ ಬಾಲಕಿಯೊಬ್ಬಳ ಮೇಲೆ ಇಸ್ರೇಲಿ ಪೊಲೀಸರು ನಡೆಸಿರುವ ದೌರ್ಜನ್ಯದ ವೀಡಿಯೋ ಒಂದು ಸಾಮಾಜಿಕ ತಾಣದಲ್ಲಿ ವೈರಲ್ ಆದ ಬಳಿಕ ಈ ಚರ್ಚೆ ಮುನ್ನೆಲೆಗೆ ಬಂದಿದೆ.
ಉಕ್ರೇನಿಯನ್ ಗಳ ಮೇಲಿನ ದಾಳಿಯನ್ನು ವಿರೋಧಿಸಿ ಪಾಶ್ಚಾತ್ಯ ರಾಷ್ಟ್ರಗಳು ರಷ್ಯಾ ಮೇಲೆ ಹೇರಿರುವ ನಿರ್ಬಂಧ, ಉಕ್ರೇನ್‌ಗೆ ನೀಡಿರುವ ಬೆಂಬಲ ಪ್ಯಾಲೆಸ್ತೀನ್‌ಗೆ ನೀಡದಿರುವ ಮತ್ತು ಇಸ್ರೇಲ್ ಅನ್ನು ನಿರ್ಬಂಧಿಸದಿರುವ ಕುರಿತು ವ್ಯಾಪಕ ಅಸಮಾಧಾನ ವ್ಯಕ್ತವಾಗಿದೆ. ಇಸ್ರೇಲ್ ಫೆಲೆಸ್ತೀನ್ ಮೇಲೆ ಮಾಡುತ್ತಿರುವ ದಾಳಿ ಹಾಗೂ ದೌರ್ಜನ್ಯದ ಬಗ್ಗೆ, ಪಾಶ್ಚಾತ್ಯ ದೇಶಗಳು ಸೊಲ್ಲೆತ್ತದಿರುವುದು ಆ ದೇಶಗಳ ಕಪಟತನಕ್ಕೆ ಸಾಕ್ಷಿ ಎಂದು ಟೀಕೆಗಳು ವ್ಯಕ್ತವಾಗುತ್ತಿದೆ.
ಉಕ್ರೇನ್ ಮೇಲೆ ದಾಳಿ ಆದಾಗ ʼಯುದ್ಧ ಬೇಡʼ ಅನ್ನುವವರು ಲಿಬಿಯಾ, ಪ್ಯಾಲೆಸ್ತೀನ್ ಮೊದಲಾದ ಮಧ್ಯಪ್ರಾಚ್ಯ ರಾಷ್ಟ್ರಗಳ ಮೇಲೆ ಇಸ್ರೇಲ್ ನಂತಹ ದೇಶಗಳು ದಾಳಿ ಮಾಡುವಾಗ ಯಾಕೆ ಯುದ್ಧ ಬೇಡ ಅಂದಿಲ್ಲ, ಇದು ಪಾಶ್ಚಾತ್ಯ ರಾಷ್ಟ್ರಗಳ ಬೂಟಾಟಿಕೆ ಎಂಬ ವಿಮರ್ಶೆಗಳು ಕೇಳಿಬಂದಿವೆ.
ಅದು ಮಾತ್ರವಲ್ಲದೆ, ಫೆಲೆಸ್ತೀನ್ ಹೋರಾಟಗಾರರನ್ನು ʼಭಯೋತ್ಪಾದಕರು, ತೀವ್ರವಾದಿಗಳುʼ ಎಂದು ಸಂಬೋಧಿಸುವ ಬಗ್ಗೆಯೂ ಪ್ರಶ್ನೆಗಳು ಎದ್ದಿವೆ. ಉಕ್ರೇನಿಯನ್ನರು ರಷ್ಯಾದ ಆಕ್ರಮಣ ವಿರುದ್ಧ ಹೋರಾಡಿದರೆ ʼವೀರ ಹೋರಾಟಗಾರರುʼ ಅದನ್ನೇ ಪ್ಯಾಲೆಸ್ತೀನಿಯನ್ನರು ಮಾಡಿದರೆ ತೀವ್ರವಾದವೇ ಎಂದು ಹಲವು ಸಾಮಾಜಿಕ ತಾಣ ಬಳಕೆದಾರರು ಪ್ರಶ್ನಿಸಿದ್ದಾರೆ.
ಅದರಲ್ಲೂ, ಇಸ್ರೇಲ್ ಆಕ್ರಮಿತ ಡಮಾಸ್ಕಸ್‌ನಲ್ಲಿ ನಡೆದಿದೆ ಎನ್ನಲಾದ ವಿಡಿಯೋ ಈಗ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕ ವೈರಲ್ ಆಗುತ್ತಿದೆ. ಇಸ್ರೇಲ್ ಭದ್ರತಾ ಪಡೆಯ ಸಿಬ್ಬಂದಿಗಳು ಪ್ಯಾಲೆಸ್ತೀನ್ ಬಾಲಕಿಯ ಮೇಲೆ ದಾಳಿ ಮಾಡುತ್ತಿರುವ ವಿಡಿಯೋ ಈಗ ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದು, ಪ್ಯಾಲೆಸ್ತೀನ್ ನಾಗರಿಕರ ಮೇಲೆ ನಿತ್ಯ ನಡೆಯುತ್ತಿರುವ ದೌರ್ಜನ್ಯ ಮಾಧ್ಯಮಗಳ ಪಾಲಿಗೆ ಸುದ್ದಿಯಾಗದಿರುವುದು ವಿಪರ್ಯಾಸ ಎಂದು ಹಲವು ನೆಟ್ಟಿಗರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಡಮಾಸ್ಕಸ್ ನಲ್ಲಿರುವ ಅಲ್-ಅಕ್ಸಾ ಮಸೀದಿಯಲ್ಲಿ ಪ್ರಾರ್ಥನೆ ಮಾಡಿದ ಆರೋಪದ ಮೇಲೆ ಫೆಲೆಸ್ತೀನ್ ನಾಗರಿಕರ ಮೇಲೆ ಇಸ್ರೇಲ್ ಪಡೆ ದಾಳಿ ಮಾಡಿದ್ದು, 31 ಪ್ಯಾಲೆಸ್ತೀನಿಯರು ಗಾಯಗೊಂಡಿದ್ದಾರೆ, ನಾಲ್ವರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಇದು ಸರ್ಕಾರಿ ಪ್ರಾಯೋಜಿತ ಹಿಂಸಾಚಾರವಾಗಿದ್ದು, ತೀವ್ರತರವಾದ ನಿಂದನೆಯ ಮೂಲಕ ಪ್ಯಾಲೇಸ್ತೀನಿಯನ್ನರ ಜನಾಂಗೀಯ ನಿರ್ಮೂಲನೆ ನಡೆಸಲಾಗುತ್ತಿದೆ ಎಂದು ಬರಹಗಾರ್ತಿ, ಸಂಶೋದಕಿ ಮರಿಯಂ ಬರ್ಗೌತಿ ಟ್ವಿಟರಿನಲ್ಲಿ ಬರೆದಿದ್ದಾರೆ.
ಇದನ್ನು #Palestine ಎಂಬ ಹ್ಯಾಷ್‌ಟ್ಯಾಗ್‌ನೊಂದಿಗೆ ಮರು ಟ್ವೀಟ್ ಮಾಡಿರುವ ಪತ್ರಕರ್ತೆ ರಾಣಾ ಅಯೂಬ್, ಎಲ್ಲಾ ಆಕ್ರಮಣಗಳು, ಜನಾಂಗೀಯ ನಿರ್ಮೂಲನಾ ಕ್ರಿಯೆಗಳು ಸುದ್ದಿಯಾಗುವುದಿಲ್ಲ ಎಂದು ಬರೆದಿದ್ದಾರೆ.