ಪ್ರತಿಯೊಂದು ಅಡುಗೆಮನೆಯಲ್ಲೂ ಬೆಳ್ಳುಳ್ಳಿ ಇದ್ದೇ ಇರುವುದು. ಈ ಪದಾರ್ಥವಿಲ್ಲದೇ, ಯಾವುದೇ ಒಗ್ಗರಣೆ ಸಂಪೂರ್ಣವಾಗದು. ಬೆಳ್ಳುಳ್ಳಿಯಲ್ಲಿ ಅನೇಕ ಪೋಷಕಾಂಶಗಳಿರುವುದರಿಂದ, ನಮ್ಮ ದೇಹಕ್ಕೆ ತುಂಬಾ ಪ್ರಯೋಜನಕಾರಿ ಜೊತೆಗೆ ಆಹಾರದ ರುಚಿಯನ್ನೂ ಹೆಚ್ಚಿಸುವುದು. ಆದರೆ ಇದರ ಸಿಪ್ಪೆಯೂ ಸಹ ತುಂಬಾ ಉಪಯುಕ್ತವಾಗಿದೆ ಎಂದು ನಿಮಗೆ ತಿಳಿದಿದೆಯೇ?
ಹೌದು, ಬೆಳ್ಳುಳ್ಳಿಯ ಸಿಪ್ಪೆಗಳು ಆ್ಯಂಟಿ ಬ್ಯಾಕ್ಟೀರಿಯಲ್, ಆ್ಯಂಟಿ ವೈರಲ್ ಮತ್ತು ಆ್ಯಂಟಿ ಫಂಗಲ್ ಗುಣಗಳನ್ನೂ ಹೊಂದಿದ್ದು, ಜೊತೆಗೆ ಇದು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾದ ಆಲಿಸಿನ್ ಸಂಯುಕ್ತವನ್ನು ಸಹ ಹೊಂದಿದೆ. ಇವುಗಳು ನಮ್ಮ ಆರೋಗ್ಯಕ್ಕೆ ಮಾತ್ರವಲ್ಲದೇ, ಕೂದಲಿನ ಹಲವಾರು ಸಮಸ್ಯೆ ನಿವಾರಣೆಗೆ ಸಹಾಯ ಮಾಡುತ್ತವೆ. ಹಾಗಾದರೆ, ಬೆಳ್ಳುಳ್ಳಿಯ ಸಿಪ್ಪೆಯಿಂದ ನಮ್ಮ ಆರೋಗ್ಯ, ಸೌಂದರ್ಯಕ್ಕೆ ಎಂತಹ ಪ್ರಯೋಜನ ಸಿಗುವುದು ಎಂಬುದನ್ನು ಇಲ್ಲಿ ತಿಳಿಯೋಣ.
ಕೂದಲುರುವಿಕೆ ತಡೆಯುವುದು: ಕೂದಲುದುರುವುದನ್ನು ತಡೆಯಲು ಬೆಳ್ಳುಳ್ಳಿ ಸಿಪ್ಪೆ ತುಂಬಾ ಪರಿಣಾಮಕಾರಿ. ಇದಕ್ಕಾಗಿ ನೀವು ಮಾಡಬೇಕಾಗಿರುವುದು ಇಷ್ಟೇ. ಮೊದಲು ಬೆಳ್ಳುಳ್ಳಿ ಸಿಪ್ಪೆಗಳನ್ನು ನೀರಿನಲ್ಲಿ ಹಾಕಿ ಕುದಿಸಿ. ಉಗುರುಬೆಚ್ಚನೆಯ ಆ ನೀರಿನಿಂದ ಕೂದಲನ್ನು ತೊಳೆದರೆ ಕೂದಲು ಉದುರುವ ಸಮಸ್ಯೆ ದೂರವಾಗುತ್ತದೆ. ಬೆಳ್ಳುಳ್ಳಿಯ ಸಿಪ್ಪೆಯಲ್ಲಿ ಬ್ಯಾಕ್ಟೀರಿಯಾ ವಿರೋಧಿ ಗುಣಲಕ್ಷಣ ಇರುವುದರಿಂದ, ಕೂದಲುದುರಲು ಕಾರಣವಾಗುವ ಬ್ಯಾಕ್ಟೀರಿಯಾ, ಶಿಲೀಂಧ್ರಗಳನ್ನು ಹೋಗಲಾಡಿಸಿ, ಆ ಸಮಸ್ಯೆಯಿಂದ ಮುಕ್ತಿ ನೀಡುವುದು.
ಹೇನಿನ ಸಮಸ್ಯೆ ನಿವಾರಣೆ: ಒಂದು ವಯಸ್ಸಿನವರೆಗೆ ಕೂದಲಲ್ಲಿ ಹೇನಿನ ಸಮಸ್ಯೆ ಸಾಮಾನ್ಯವಾಗಿರುತ್ತದೆ. ಇದಕ್ಕೆ ಕಾರಣ, ನೈರ್ಮಲ್ಯದ ಕೊರತೆ. ಕೂದಲನ್ನು ಸರಿಯಾಗಿ ಸ್ವಚ್ಛಗೊಳಿಸದೇ ಇದ್ದಾಗ, ಅದರಲ್ಲಿ ಬೆವರು, ಕೊಳೆ ಶೇಖರಣೆಯಾಗಿ ಹೇನಿನಂತಹ ಜೀವಿಗಳು ಹುಟ್ಟಿಕೊಳ್ಳುತ್ತವೆ. ಇದನ್ನು ಹೋಗಲಾಡಿಸಲು ಬೆಳ್ಳುಳ್ಳಿ ಸಿಪ್ಪೆಗಳ ಪೇಸ್ಟ್ ಮಾಡಿ. ಅದಕ್ಕೆ ನಿಂಬೆರಸವನ್ನು ಬೆರೆಸಿ ಕೂದಲಿನ ಬುಡಕ್ಕೆ ಹಚ್ಚುವುದರಿಂದ ಹೇನಿನ ಸಮಸ್ಯೆ ದೂರವಾಗುತ್ತವೆ.
ಕೂದಲನ್ನು ಕಪ್ಪಾಗಿಸಲು: ಬಿಳಿ ಕೂದಲಿನ ಸಮಸ್ಯೆಯನ್ನು ಕಡಿಮೆ ಮಾಡುವ ನೈಸರ್ಗಿಕ ವಿಧಾನದಲ್ಲಿ ಈ ಬೆಳ್ಳುಳ್ಳಿ ಸಹ ಸೇರುವುದು. ಇದಕ್ಕಾಗಿ ಬಾಣಲೆಯಲ್ಲಿ ಬೆಳ್ಳುಳ್ಳಿ ಸಿಪ್ಪೆಗಳನ್ನು ಬಿಸಿ ಮಾಡಿ, ಪುಡಿ ಮಾಡಿ. ಅದಕ್ಕೆ ಆಲಿವ್ ಎಣ್ಣೆಯನ್ನು ಬೆರೆಸಿ ಕೂದಲಿಗೆ ಹಚ್ಚುವುದರಿಂದ ಕೂದಲು ಕಪ್ಪಾಗುತ್ತದೆ. ಇದರಿಂದ ಯಾವುದೇ ಅಡ್ಡಪರಿಣಾಮಗಳಿಲ್ಲದಿರವುದರಿಂದ, ಬಳಕೆಗೆ ಸುರಕ್ಷಿತವಾಗಿದೆ.
ಮೊಡವೆಗಳ ನಿವಾರಣೆ: ಸಾಮಾನ್ಯವಾಗಿ ಹೆಚ್ಚಿನವರು ಎದುರಿಸುತ್ತಿರುವ ಸಮಸ್ಯೆ ಈ ಮೊಡವೆ. ಇದು ಮುಖ, ಬೆನ್ನು ಕೆಲವೊಮ್ಮೆ ನೆತ್ತಿಯ ಮೇಲಾಗುವುದು ಉಂಟು. ಇದನ್ನು ಹೋಗಲಾಡಿಸಲು. ಬೆಳ್ಳುಳ್ಳಿಯ ಸಿಪ್ಪೆಯನ್ನು ಪುಡಿಮಾಡಿ ಮೊಡವೆಗಳ ಮೇಲೆ ಹಚ್ಚಿ. ಇದರಲ್ಲಿರುವ ಬ್ಯಾಕ್ಟೀರಿಯಾ ವಿರೋಧಿ ಗುಣಲಕ್ಷಣಗಳು ಮೊಡವೆಗಳನ್ನು ಗುಣಪಡಿಸಲು ಸಹಾಯ ಮಾಡುತ್ತದೆ.
ಶೀತ ಹಾಗೂ ಜ್ವರ: ಹವಾಮಾನ ಬದಲಾವಣೆಯಿಂದ ಅಥವಾ ವೈರಲ್ ಸೋಂಕಿನಿಂದ ಆಗಾಗ ಶೀತ ಹಾಗೂ ಜ್ವರ ಭಾಧಿಸುವುದು. ಇದಕ್ಕೆ ಬೆಳ್ಳುಳ್ಳಿ ಸಿಪ್ಪೆಯಿಂದ ಸುಲಭವಾಗಿ ಪರಿಹಾರವನ್ನು ಪಡೆಯಬಹುದು. ಇದಕ್ಕಾಗಿ ಬೆಳ್ಳುಳ್ಳಿ ಸಿಪ್ಪೆಗಳನ್ನು ನೀರಿನಲ್ಲಿ ಹಾಕಿ ಕುದಿಸಿ. ಇದನ್ನು ಫಿಲ್ಟರ್ ಮಾಡಿ ಕುಡಿಯುವುದರಿಂದ ಶೀತ ಮತ್ತು ಜ್ವರದಲ್ಲಿ ಪರಿಹಾರ ಸಿಗುತ್ತದೆ.
ಪಾದಗಳ ಊತ ನಿವಾರಣೆ: ವಯಸ್ಸಾದ ಮೇಲೆ ಹೆಚ್ಚು ಕಾಲ ಒಂದೇ ಕಡೆ ಕುಳಿತುಕೊಂಡಿದ್ದರೆ ಅಥವಾ ದೂರ ಪ್ರಯಾಣ ಮಾಡಿದರೆ, ಪಾದಗಳಲ್ಲಿ ಊತ ಕಾಣಿಸಿಕೊಳ್ಳುವುದು. ಇದನ್ನು ಕಡಿಮೆ ಮಾಡಲು ಬೆಳ್ಳುಳ್ಳಿ ಸಿಪ್ಪೆಗಳು ಪರಿಣಾಮಕಾರಿ. ಇದಕ್ಕೆ ಮಾಡಬೇಕಾಗಿರುವುದು ಬೆಳ್ಳುಳ್ಳಿ ಸಿಪ್ಪೆಗಳನ್ನು ನೀರಿನಲ್ಲಿ ಹಾಕಿ ಕುದಿಸಿ. ಈ ನೀರಿನಲ್ಲಿ ಪಾದಗಳನ್ನು ಸ್ವಲ್ಪ ಸಮಯ ಬೆಚ್ಚಗೆ ಇಡುವುದರಿಂದ ಪಾದಗಳ ಊತ ಕಡಿಮೆಯಾಗುತ್ತದೆ.