ನವದೆಹಲಿ: ರಷ್ಯಾ ಕ್ರೈಮಿಯಾ ಸ್ವಾಧೀನಪಡಿಸಿಕೊಂಡ ಎಂಟನೇ ವರ್ಷದ ಸ್ಮರಣಾರ್ಥ ಅರ್ಟಿಕಲ್ ಪ್ರಕಟಿಸಿದ ಕೆಲ ಭಾರತೀಯ ಮಾಧ್ಯಮಗಳ ವಿರುದ್ಧ ಭಾರತದಲ್ಲಿನ ಉಕ್ರೇನ್ ರಾಯಭಾರಿ ಹರಿಹಾಯ್ದಿದ್ದಾರೆ.
ರಷ್ಯಾದಿಂದ ಕ್ರೈಮಿಯಾ ವಶಕ್ಕೆ ಪಡೆದ ಎಂಟನೇ ವರ್ಷದ ಸ್ಮರಣಾರ್ಥ ಪ್ರತ್ಯೇಕ ಪುಟ ಪ್ರಕಟಣೆ ಸೇರಿದಂತೆ ಹೋಳಿ ಹಬ್ಬದ ಉಡುಗೊರೆಯಿಂದ ನಾವು ತೀವ್ರ ಆಘಾತಕ್ಕೊಳಗಾಗಿದ್ದೇವೆ. ಇದನ್ನು ಯಾವುದೇ ರಾಷ್ಟ್ರಗಳು ಮಾನ್ಯ ಮಾಡುವುದಿಲ್ಲ ಎಂಬುದು ನಿಮಗೆ ಅರಿವಿದೆಯೇ ಎಂದು ಈ ಅರ್ಟಿಕಲ್ ಪ್ರಕಟಿಸಿದ ಕೆಲ ಮಾಧ್ಯಮಗಳಿಗೆ ಭಾರತದಲ್ಲಿನ ಉಕ್ರೇನ್ ರಾಯಭಾರಿ ಇಗೋರ್ ಪೋಲಿಖಾ ಬರೆದಿರುವ ಪತ್ರದಲ್ಲಿ ಹೇಳಿದ್ದಾರೆ.
ಈ ಲೇಖನ ಪ್ರಕಟಣೆಗಾಗಿ 'ರಕ್ತದ ಹಣ' ಪಾವತಿಸಲಾಗಿದೆ. ಆದ ಕಾರಣ ಉಕ್ರೇನ್ ನ ವಸತಿ ಪ್ರದೇಶದಲ್ಲಿನ ಶೆಲ್ ದಾಳಿಯಿಂದ ಸಾವಿರಾರು ಜನರ ಹತ್ಯೆ ಮತ್ತು ಗಾಯಾಳುಗಳ ಬಗ್ಗೆ ಅವರಿಗೆ ಕಾಳಜಿ ಇಲ್ಲ. ಇದರಿಂದಾಗಿ ಸುಮಾರು 3 ಮಿಲಿಯನ್ ಉಕ್ರೇನ್ ಪ್ರಜೆಗಳು ದೇಶ ತೊರೆಯುತ್ತಿರುವುದಾಗಿ ಅವರು ಹರಿಹಾಯ್ದಿದ್ದಾರೆ.
ಉಕ್ರೇನ್ ನ ಗಡಿ ಪ್ರದೇಶ ಮತ್ತು ಕ್ರೈಮಿಯಾ, ಸೆವಾಸ್ತೊಪೊಲ್ ನಗರ ರಷ್ಯಾ ಸ್ವಾಧೀನಕ್ಕೆ ಸಂಬಂಧಿಸಿದಂತೆ ಮಾರ್ಚ್ 27, 2014ರಲ್ಲಿ ವಿಶ್ವಸಂಸ್ಥೆ ಅಂಗೀಕರಿಸಿರುವ ನಿರ್ಣಯವನ್ನು ನೆನಪಿಸಲು ಬಯಸುತ್ತೇನೆ. ಕ್ರೈಮಿಯಾ ಮತ್ತು ಸೆವಾಸ್ತೊಪೊಲ್ ನಗರ ರಷ್ಯಾ ಸ್ವಾಧೀನವನ್ನು ಮಾನ್ಯ ಮಾಡದಂತಹ ನೀತಿಯನ್ನು ವಿಶ್ವಸಂಸ್ಥೆ ಸಾಮಾನ್ಯಸಭೆ ಪರಿಚಯಿಸಿರುವುದಾಗಿ ಪೋಲಿಖಾ ಹೇಳಿದ್ದಾರೆ.