ತ್ರಿಶೂರ್: ಕೆಲಸದಿಂದ ಹಿತ್ತು ಹಾಕಿದ್ದ ಮಹಿಳೆಯೊಬ್ಬಳನ್ನು ಮಾಜಿ ಉದ್ಯೋಗಿಯೊಬ್ಬ ಹತ್ಯೆ ಮಾಡಿರುವ ಘಟನೆ ಕೇರಳ ರಾಜ್ಯದ ತ್ರಿಶೂರ್ ಜಿಲ್ಲೆಯಲ್ಲಿ ನಡೆದಿದೆ. ಕಳೆದ ರಾತ್ರಿ ಕೊಡುಂಗಲ್ಲೂರು ಗ್ರಾಮದಲ್ಲಿ ಆಕೆ ಮನೆಗೆ ಬರುತ್ತಿದ್ದಾಗ ಮಾಜಿ ಉದ್ಯೋಗಿ ರಿಯಾಜ್ ದಾಳಿ ನಡೆಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ರಿನ್ಸಿ (30) ಕೊಲೆಯಾದ ಮಹಿಳೆಯಾಗಿದ್ದಾಳೆ. ಈಕೆ ತನ್ನಿಬ್ಬರು ಮಕ್ಕಳೊಂದಿಗೆ ಸ್ಕೂಟರ್ ನಲ್ಲಿ ಮನೆಗೆ ತೆರಳುತ್ತಿದ್ದಾಗ ರಿಯಾಜ್ ದಾಳಿ ನಡೆಸಿದ್ದಾನೆ. ನಂತರ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಶುಕ್ರವಾರ ಆಕೆ ಮೃತಪಟ್ಟಿರುವುದಾಗಿ ಪೊಲೀಸರು ಹೇಳಿದ್ದಾರೆ.
ಏನೋ ಕಾರಣದಿಂದ ರಿಯಾಜ್ ನನ್ನು ಟೆಕ್ಸ್ ಟೈಲ್ ಅಂಗಡಿಯಿಂದ ರಿನ್ಸಿ ಕಿತ್ತುಹಾಕಿದ್ದಳು. ಈ ಹಿಂದೆ ಕೂಡಾ ಆಕೆಯ ಮೇಲೆ ರಿಯಾಜ್ ದಾಳಿ ನಡೆಸಿದ್ದ ಎಂದು ಅವರು ತಿಳಿಸಿದ್ದಾರೆ. ರಿನ್ಸಿ ರಿಯಾಜ್ ವಿರುದ್ಧ ಕೊಡುಂಗಲೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರೂ ದಾಳಿಯಿಂದ ತಡೆಯಲು ಸಾಧ್ಯವಾಗಲಿಲ್ಲ ಎಂದು ಮೂಲಗಳು ಹೇಳಿವೆ.
ಗುರುವಾರ ರಾತ್ರಿ ರಿನ್ಸಿ ಯಾವಾಗಲೂ ಓಡಾಡುವ ಸ್ಥಳವೊಂದರಲ್ಲಿ ಹೊಂಚು ಹಾಕಿ ಕುಳಿತಿದ್ದ ರಿಯಾಜ್, ಆಕೆ ಸ್ಕೋಟರ್ ನಲ್ಲಿ ಬಂದ ತಕ್ಷಣವೇ ಆಕೆಯ ಮೇಲೆ ದಾಳಿ ನಡೆಸಿದ್ದಾನೆ. ಘಟನೆಯನ್ನು ನೋಡಿದ ನೆರೆಹೊರೆಯವರು ಆಕೆಯನ್ನು ಆಸ್ಪತ್ರೆಗೆ ಸೇರಿಸಿದ್ದಾರೆ. ಘಟನೆ ನಂತರ ಆರೋಪಿ ತಲೆಮರೆಸಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.