ನವದೆಹಲಿ :ಮಲಯಾಳಂ ಸುದ್ದಿವಾಹಿನಿ ಮೀಡಿಯಾ ಒನ್ ಗೆ ಮಾಹಿತಿ ಹಾಗೂ ಪ್ರಸಾರ ಸಚಿವಾಲಯವು ಇತ್ತೀಚೆಗೆ ವಿಧಿಸಿದ್ದ ನಿಷೇಧವನ್ನು ಎತ್ತಿಹಿಡಿಯುವ ಕೇರಳ ಹೈಕೋರ್ಟ್ ನ ಆದೇಶವನ್ನು ಪ್ರಶ್ನಿಸಿ ಕೇರಳದ ಕಾರ್ಯನಿರತ ಪತ್ರಕರ್ತರ ಸಂಘ ಸಲ್ಲಿಸಿದ ಮೇಲ್ಮನವಿಗೆ ಸಂಬಂಧಿಸಿ ಸುಪ್ರೀಂಕೋರ್ಟ್ ಸೋಮವಾರ ನೋಟಿಸ್ ಜಾರಿ ಮಾಡಿದೆ.
ನ್ಯಾಯಮೂರ್ತಿಗಳಾದ ಡಿ.ವೈ. ಚಂದ್ರಚೂಡ್ ಮತ್ತು ಸೂರ್ಯಕಾಂತ್ ಅವರ ಪೀಠವು ಕೇರಳ ಹೈಕೋರ್ಟ್ ನ ಆದೇಶಕ್ಕೆ ಸಂಬಂಧಿಸಿ ಮೀಡಿಯಾ ಒನ್ ಹಾಗೂ ಪತ್ರಕರ್ತ ಸಂಘ ಸಲ್ಲಿಸಿರುವ ಮನವಿಯನ್ನು ಒಟ್ಟಿಗೆ ವಿಚಾರಣೆ ನಡೆಸಲು ನಿರ್ಧರಿಸಿದೆ.
ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಪೀಠ, "ಮಿಸ್ಟರ್ ಬೀರಾನ್, ನಾವು ನೋಟಿಸ್ ಜಾರಿ ಮಾಡುತ್ತೇವೆ ಹಾಗೂ ಇತರ ವಿಷಯದೊಂದಿಗೆ ಅದನ್ನು ಟ್ಯಾಗ್ ಮಾಡುತ್ತೇವೆ" ಎಂದು ಹೇಳಿದರು.
ಅರ್ಜಿದಾರರ ಪರ ವಕೀಲ ಹಾರಿಸ್ ಬೀರನ್ ವಾದ ಮಂಡಿಸಿದ್ದರು.
ಮಾರ್ಚ್ 15, 2022 ರಂದು ಸುಪ್ರೀಂಕೋರ್ಟ್ ಮಲಯಾಳಂ ಸುದ್ದಿ ವಾಹಿನಿ ಮೀಡಿಯಾ ಒನ್ ಮೇಲೆ ಕೇಂದ್ರ ಸರಕಾರವು ವಿಧಿಸಿದ ಪ್ರಸಾರ ನಿಷೇಧಕ್ಕೆ ತಡೆಯಾಜ್ಞೆ ನೀಡಿತ್ತು.
ನ್ಯಾಯಮೂರ್ತಿಗಳಾದ ಡಿ.ವೈ.ಚಂದ್ರಚೂಡ, ಸೂರ್ಯಕಾಂತ್ ಮತ್ತು ವಿಕ್ರಮ ನಾಥ್ ಅವರ ಪೀಠವು ಚಾನೆಲ್ ನಡೆಸುತ್ತಿರುವ ಕಂಪನಿಗೆ ಸಂಬಂಧಿಸಿದಂತೆ ಗೃಹ ಸಚಿವಾಲಯ ಸಲ್ಲಿಸಿದ ಕಡತಗಳನ್ನು ಪರಿಶೀಲಿಸಿದ ನಂತರ ಈ ಆದೇಶವನ್ನು ನೀಡಿತ್ತು.