ನವದೆಹಲಿ: 1989-1991ರ ಅವಧಿಯಲ್ಲಿ ಕಾಶ್ಮೀರಿ ಪಂಡಿತರನ್ನು ಕಗ್ಗೊಲೆ ಮಾಡಲಾಗಿತ್ತು ಎಂದು ವಾಷಿಂಗ್ಟನ್ ಮೂಲದ ಮಾನವ ಹಕ್ಕುಗಳು ಮತ್ತು ಧಾರ್ಮಿಕ ಸ್ವಾತಂತ್ರ್ಯದ ಅಂತರರಾಷ್ಟ್ರೀಯ ಆಯೋಗ(ಐಸಿಎಚ್ಆರ್‌ಆರ್‌ಎಫ್) ಒಪ್ಪಿಕೊಂಡಿದೆ.
ಭಾನುವಾರ ನಡೆದ ವಿಶೇಷ ವಿಚಾರಣೆಯಲ್ಲಿ ಸುಮಾರು 12 ಕಾಶ್ಮೀರಿ ಪಂಡಿತರು ತಮ್ಮ ಕುಟುಂಬದ ವಿರುದ್ಧ ನಡೆದ ದೌರ್ಜನ್ಯದ ಸಾಕ್ಷ್ಯ ನೀಡಿದರು.
ಆಯೋಗವು ಕಾಶ್ಮೀರ ಹತ್ಯೆಯನ್ನು ನರಮೇಧವೆಂದು ಪರಿಗಣಿಸಿ ಮತ್ತು ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಭಾರತ ಸರ್ಕಾರ ಮತ್ತು ಜಮ್ಮು ಮತ್ತು ಕಾಶ್ಮೀರ ಸರ್ಕಾರಕ್ಕೆ ಹೇಳಿದೆ. ಇತ್ತೀಚೆಗೆ ಬಿಡುಗಡೆಯಾದ ದಿ ಕಾಶ್ಮೀರ್ ಫೈಲ್ಸ್ ಚಿತ್ರದಲ್ಲೂ ಪಂಡಿತರ ಮೇಲಿನ ದೌರ್ಜನ್ಯವನ್ನು ಚಿತ್ರಿಸಲಾಗಿತ್ತು.
ಮಾನವ ಹಕ್ಕುಗಳು ಮತ್ತು ಧಾರ್ಮಿಕ ಸ್ವಾತಂತ್ರ್ಯಕ್ಕಾಗಿ ಅಂತಾರಾಷ್ಟ್ರೀಯ ಆಯೋಗವು ಮಾನವ ಹಕ್ಕುಗಳು ಮತ್ತು ಮೂಲಭೂತ ಸ್ವಾತಂತ್ರ್ಯಗಳನ್ನು ಉತ್ತೇಜಿಸಲು ಕೆಲಸ ಮಾಡುತ್ತಿದೆ. ಆಯೋಗವು ಮಾರ್ಚ್ 27 ರಂದು ಕಾಶ್ಮೀರಿ ಹಿಂದೂಗಳ ನರಮೇಧದ ಸಮಸ್ಯೆಯನ್ನು ಆಲಿಸಿತು. ಇದರಲ್ಲಿ, ಹಿಂಸಾಚಾರಕ್ಕೆ ಗುರಿಯಾದ ಹಾಗೂ ಮಕ್ಕಳನ್ನು, ಸಂಬಂಧಿಕರನ್ನು ಕಳೆದುಕೊಂಡವರು ಸಾಕ್ಷಿಗಳನ್ನು ಪ್ರಸ್ತುತಪಡಿಸಿದರು. ಜನಾಂಗೀಯ ಮತ್ತು ಸಾಂಸ್ಕೃತಿಕ ಕಗ್ಗೊಲೆಯಾಗಿದೆ ಎಂದು ಸಂತ್ರಸ್ತರು ಹೇಳಿದರು. ನರಮೇಧ ಮತ್ತು ಮಾನವೀಯತೆಯ ವಿರುದ್ಧದ ಅಪರಾಧಗಳು ಹಾಗೂ ಬದುಕುಳಿದವರ ಘನತೆಯನ್ನು ಖಾತ್ರಿಪಡಿಸುವುದು. ಈ ಅಪರಾಧ ಮಾಡಿದವರನ್ನು ಶಿಕ್ಷೆ ಅಡಿ ತರಲು ತಾವು ಸಿದ್ಧವಾಗಿದ್ದೇವೆ ಎಂದು ಆಯೋಗ ಹೇಳಿದೆ.
1989-1991 ರ ಕಾಶ್ಮೀರಿ ಹಿಂದೂಗಳ ಮೇಲಿನ ದೌರ್ಜನ್ಯವನ್ನು ನರಮೇಧವೆಂದು ಒಪ್ಪಿಕೊಳ್ಳುವಂತೆ ಆಯೋಗವು ಭಾರತ ಸರ್ಕಾರ ಮತ್ತು ಜಮ್ಮು ಮತ್ತು ಕಾಶ್ಮೀರ ಸರ್ಕಾರಕ್ಕೆ ಕರೆ ನೀಡಿದೆ. ಆಯೋಗವು ಇತರ ಮಾನವ ಹಕ್ಕುಗಳ ಸಂಘಟನೆಗಳು, ಅಂತರಾಷ್ಟ್ರೀಯ ಸಂಸ್ಥೆಗಳಿಗೆ ತನಿಖೆ ನಡೆಸಿ ಅದನ್ನು ನರಮೇಧ ಎಂದು ಪರಿಗಣಿಸುವಂತೆ ಮನವಿ ಮಾಡಿದೆ. ಕಾಶ್ಮೀರಿ ಪಂಡಿತರ ಮೇಲಿನ ದೌರ್ಜನ್ಯದ ಬಗ್ಗೆ ವಿಶ್ವದ ರಾಷ್ಟ್ರಗಳು ಕೇಳಬೇಕು ಎಂದು ಆಯೋಗ ಹೇಳಿದೆ.
90 ರ ದಶಕದಲ್ಲಿ ಕಾಶ್ಮೀರದಲ್ಲಿ ಹಿಂದೂ ಪಂಡಿತರ ಸಾವಿರಾರು ಮನೆಗಳು ಮತ್ತು ದೇವಾಲಯಗಳು ನಾಶವಾಗಿದ್ದವು. 4 ಲಕ್ಷಕ್ಕೂ ಹೆಚ್ಚು ಕಾಶ್ಮೀರಿ ಹಿಂದೂ ಪುರುಷರು, ಮಹಿಳೆಯರು ಮತ್ತು ಮಕ್ಕಳನ್ನು ಭಯೋತ್ಪಾದಕರು ಬಂದೂಕು ತೋರಿಸಿ ಗಡಿಪಾರಾಗುವಂತೆ ಒತ್ತಾಯಿಸಿದರು. ಮಹಿಳೆಯರ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಲಾಯಿತು. ಕಳೆದ 32 ವರ್ಷಗಳಲ್ಲಿ ಕಾಶ್ಮೀರ ಪಂಡಿತರ ಮತ್ತವರ ಸಂಸ್ಕೃತಿ ಅಳಿವಿನ ಅಂಚಿನಲ್ಲಿದೆ.
ವಿಚಾರಣೆಯ ಸಮಯದಲ್ಲಿ ದೌರ್ಜನ್ಯಕ್ಕೆ ತತ್ತರಿಸಿದ ಸಂತ್ರಸ್ತರು ಅನೇಕ ಸಾಕ್ಷಿಗಳನ್ನು ನೀಡಿದರು. 90ರ ದಶಕದಲ್ಲಿ ನಡೆದ ಹತ್ಯೆಯನ್ನು ಯಹೂದಿಗಳ ನರಮೇಧಕ್ಕೆ ಹೋಲಿಸಲಾಯಿತು. ಭಯೋತ್ಪಾದಕರು ತಮ್ಮನ್ನು ಕಾಶ್ಮೀರದಿಂದ ಹೊರಹಾಕಿದರು ಎಂದು ಹೇಳಿದರು. ಅವರಲ್ಲಿ ಹೆಚ್ಚಿನ ಸಂಖ್ಯೆಯ ಹಿಂದೂಗಳು, ಮಹಿಳೆಯರು ಮತ್ತು ಪುರುಷರು ಮತ್ತು ಮಕ್ಕಳು ಇದ್ದಾರೆ ಎಂದು ತಿಳಿಸಿದರು.