ನವದೆಹಲಿ: ಕೇಂದ್ರೀಯ ಶಾಲೆಗಳಲ್ಲಿ ಪ್ರತಿ ಶೈಕ್ಷಣಿಕ ವರ್ಷದಲ್ಲಿ (ಸಂಸದರ ಕೋಟಾ) 10 ವಿದ್ಯಾರ್ಥಿಗಳ ಪ್ರವೇಶಕ್ಕೆ ಶಿಫಾರಸು ಮಾಡುವ ಸಂಸದರ ವಿಶೇಷಾಧಿಕಾರವನ್ನು ಕೊನೆಗೊಳಿಸಬೇಕೇ ಎಂಬ ವಿಷಯದ ಕುರಿತು ರಾಜಕೀಯ ಪಕ್ಷಗಳ ಮುಖಂಡರೊಂದಿಗೆ ಕೇಂದ್ರ ಸರ್ಕಾರ ಚರ್ಚಿಸಲಿದೆ.
ಸೋಮವಾರ ಲೋಕಸಭೆಯಲ್ಲಿ ಈ ವಿಷಯವನ್ನು ಚರ್ಚಿಸಿದ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದ್ದು. ಈ ಸಂಬಂಧ ರಾಜಕೀಯ ಪಕ್ಷಗಳ ಮುಖಂಡರೊಂದಿಗೆ ಸಭೆ ನಡೆಸುವಂತೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರಿಗೆ ಸ್ಪೀಕರ್ ಓಂ ಬಿರ್ಲಾ ಅವರು ಸೂಚಿಸಿದ್ದಾರೆ.
ಕೇಂದ್ರೀಯ ಶಾಲೆಗಳಲ್ಲಿ ಸಂಸದರ ಕೋಟಾ ರದ್ದುಗೊಳಿಸಬೇಕೇ ಬೇಡವೇ ಎಂದು ಸದನದಲ್ಲಿ ರಾಜಕೀಯ ಪಕ್ಷಗಳ ಮುಖಂಡರೊಂದಿಗೆ ಸಚಿವರು ಸಭೆ ನಡೆಸಲಿ. ಈ ತಾರತಮ್ಯದ ಕೋಟಾ ನಮಗೇಕೆ, ಪಕ್ಷಗಳ ಮುಖಂಡರ ಜತೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು" ಓಂ ಬಿರ್ಲಾ ಅವರು ಹೇಳಿದ್ದಾರೆ.
ಈ ವಿಷಯವನ್ನು ಮೊದಲು ಪ್ರಸ್ತಾಪಿಸಿದ ಕಾಂಗ್ರೆಸ್ ಸಂಸದ ಮನೀಶ್ ತಿವಾರಿ ಅವರು, ಕೇಂದ್ರೀಯ ಶಾಲೆಗಳ ಸೀಟುಗಳಿಗೆ ಶಿಫಾರಸು ಮಾಡುವಂತೆ ಸಾಕಷ್ಟು ವಿನಂತಿಗಳನ್ನು ಸ್ವೀಕರಿಸುವುದರಿಂದ ಸಂಸದರಿಗೆ 10 ಸೀಟುಗಳ ಕೋಟಾ ಅಸಮರ್ಪಕವಾಗಿದೆ ಎಂದು ಹೇಳಿದರು.
ಈ ಕೋಟಾವನ್ನು ರದ್ದುಗೊಳಿಸಬೇಕು ಅಥವಾ ಹೆಚ್ಚಿಸಬೇಕು ಎಂದು ತಿವಾರಿ ಹೇಳಿದರು.
ಸಂಸದರ ಕೋಟಾವನ್ನು ರದ್ದುಗೊಳಿಸುವ ಬಗ್ಗೆ ಸದನವು ಸರ್ವಾನುಮತದಿಂದ ನಿರ್ಧಾರ ತೆಗೆದುಕೊಂಡರೆ, ಸರ್ಕಾರವು ಆ ದಿಕ್ಕಿನಲ್ಲಿ ಕೆಲಸ ಮಾಡಬಹುದು ಎಂದು ಪ್ರಧಾನ್ ತಿಳಿಸಿದರು.