ನವದೆಹಲಿ: 'ದೇಶದಲ್ಲಿ ಕೋವಿಡ್‌ನಿಂದಾಗಿ ಮೃತಪಟ್ಟವರ ಸಂಖ್ಯೆಗೆ ಸಂಬಂಧಿಸಿ ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಮಾಹಿತಿಯೇ ಶಂಕಾಸ್ಪದವಾಗಿದೆ' ಎಂದು ಕಾಂಗ್ರೆಸ್‌ನ ಹಿರಿಯ ಮುಖಂಡ ಪಿ.ಚಿದಂಬರಂ ಗುರುವಾರ ಹೇಳಿದ್ದಾರೆ.
ಶೈಕ್ಷಣಿಕ ನಿಯತಕಾಲಿಕೆ 'ಸೈನ್ಸ್'ನಲ್ಲಿ ಪ್ರಕಟವಾಗಿರುವ ವರದಿಯನ್ನು ಉಲ್ಲೇಖಿಸಿ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
'2020ರ ಜೂನ್ 1ರಿಂದ 2021ರ ಜುಲೈ 1ರ ವರೆಗಿನ ಅವಧಿಯಲ್ಲಿ ದೇಶದಲ್ಲಿ ಕೋವಿಡ್‌ನಿಂದ ಮೃತಪಟ್ಟವರ ಸಂಖ್ಯೆ 4 ಲಕ್ಷ ಎಂದು ಸರ್ಕಾರ ಹೇಳಿದೆ. ಆದರೆ, ಈ ಅವಧಿಯಲ್ಲಿ ಕೋವಿಡ್‌ನಿಂದಾಗಿ ಸಾವನ್ನಪ್ಪಿದವರ ಸಂಖ್ಯೆ 32 ಲಕ್ಷ ಇದ್ದು, ಇದು ಅಧಿಕೃತ ಸಂಖ್ಯೆಗಿಂತ ಎಂಟು ಪಟ್ಟು ಹೆಚ್ಚು ಎಂಬುದಾಗಿ ಈ ನಿಯತಕಾಲಿಕೆಯ ವರದಿಯಲ್ಲಿ ಅಂದಾಜಿಸಲಾಗಿದೆ' ಎಂದು ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
'ಈ ಸಾವುಗಳ ಪೈಕಿ, ಕಳೆದ ವರ್ಷದ ಏಪ್ರಿಲ್, ಮೇ ಹಾಗೂ ಜೂನ್ ಅವಧಿಯಲ್ಲಿ ಮೃತಪಟ್ಟವರ ಸಂಖ್ಯೆಯೇ 27 ಲಕ್ಷ ಎಂಬುದಾಗಿಯೂ 'ಸೈನ್ಸ್' ವರದಿಯಲ್ಲಿ ವಿವರಿಸಲಾಗಿದೆ' ಎಂದಿದ್ದಾರೆ.
'ದೇಶದಲ್ಲಿ 6,38,365 ಗ್ರಾಮಗಳಿವೆ. ಸರ್ಕಾರದ ಅಂಕಿ-ಅಂಶಗಳ ಪ್ರಕಾರ, ಪ್ರತಿ ಗ್ರಾಮದಲ್ಲಿ ಮೃತಪಟ್ಟವರ ಸರಾಸರಿ ಸಂಖ್ಯೆ 1 ಆಗುತ್ತದೆ. ಇದು ನಂಬಲು ಅಸಾಧ್ಯ' ಎಂದೂ ಅವರು ಅಚ್ಚರಿ ವ್ಯಕ್ತಪಡಿಸಿದ್ದಾರೆ.