ಉಪ್ಪಳ: ಯಕ್ಷಮೌಕ್ತಿಕ ಮಹಿಳಾಕೂಟ ಮಂಗಲ್ಪಾಡಿ ಕಲಾತಂಡವು ನಡೆಸುವ ತಂಡದ ಗುರುಗಳಾದ ಹರೀಶ್ ಬಳಂತಿಮೊಗರು ಇವರ ಸ್ವರ್ಣ ಸಂಭ್ರಮಾಚರಣೆ , ಹಿರಿಯ ಸಾಧಕರಿಗೆ ಸಂಮಾನ, ಮತ್ತು ತಾಳಮದ್ಧಳೆ ಸಪ್ತಾಹ ಮಂಗಲ್ಪಾಡಿ ಏಕಾಹ ಭಜನಾ ಮಂದಿರದ ಬಳಿ ಇರುವ ಸಾಕ್ಷಾತ್ಕಾರ ಮನೆಯ ಆವರಣದಲ್ಲಿ ಪ್ರತಿ ದಿನ ಸಂಜೆ 4.30ರಿಂದ ಜರಗಲಿದ್ದು ಸಪ್ತಾಹವನ್ನು ಕೊಂಡೆವೂರು ನಿತ್ಯಾನಂದ ಯೋಗಾಶ್ರಮದ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ಇತ್ತೀಚೆಗೆ ದೀಪಬೆಳಗಿಸಿ ಉದ್ಘಾಟಿಸಿದರು. ಸಪ್ತಾಹಕ್ಕೆ ಶುಭ ಆಶೀರ್ವದ ನೀಡಿ ಮಾತನಾಡಿದ ಅವರು ಕನ್ನಡ ಭಾಷೆ, ಸಂಸ್ಕøತಿ ಉಳಿಸುವಲ್ಲಿ ತಾಳಮದ್ದಳೆ ಕೊಡುಗೆ ಮಹತ್ವದ್ದು, ಪುರಾಣ ಕತೆಗಳನ್ನು , ಧಾರ್ಮಿಕ ಜಾಗೃತಿಯನ್ನು ಜನಸಾಮಾನ್ಯರಿಗೂ ತಲಪುವಂತೆ ಮಾಡುವಲ್ಲಿ ಯಕ್ಷಗಾನ ತಾಳಮದ್ದಳೆ ಕ್ಷೇತ್ರ ಗಣನೀಯ ಸೇವೆ ಗೈಯುತ್ತಿದೆ. ಇಂದು ಮಹಿಳೆಯರೂ ಹೆಚ್ಚಿನ ಪ್ರಮಾಣದಲ್ಲಿ ಯಕ್ಷಗಾನ ಹಾಗೂ ತಾಳಮದ್ದಳೆ ಕ್ಷೇತ್ರದಲ್ಲಿ ಸೇವೆ ಗೈಯುತ್ತಿದ್ದಾರೆ. ಮುಂದೆಯೂ ಇಂತಹ ತಾಳಮದ್ದಳೆ ಕಲಾ ಸೇವೆಗಳು ಹೆಚ್ಚಿನ ಪ್ರಮಾಣದಲ್ಲಿ ಜರಗುವಂತಾಗಲಿ ಎಂದು ಹಾರೈಸಿದರು.
ಕರ್ನಾಟಕ ಯಕ್ಷಗಾನ ಅಕಾಡೆಮಿ ಸದಸ್ಯ ಯೋಗೀಶ ರಾವ್ ಚಿಗುರುಪಾದೆ ಅಧ್ಯಕ್ಷತೆ ವಹಿಸಿದ್ದರು.ಹಿರಿಯ ವೈದ್ಯ , ಸಾಮಾಜಿಕ ಧಾರ್ಮಿಕ ಕ್ಷೇತ್ರದ ಧುರೀಣ ಡಾ.ಪ್ರಭಾಕರ ಹೊಳ್ಳ ಕಯ್ಯಾರು ಅವರನ್ನು ಗಣ್ಯರ ಸಮಕ್ಷಮ ಗೌರವಿಸಲಾಯಿತು.
ತಂಡದ ಗುರು ಹಾಗೂ ಹಲವಾರು ಯುವ ಕಲಾವಿದರಿಗೆ ಮಾರ್ಗದರ್ಶಕರೂ ಆಗಿರುವ ಹರೀಶ್ ಬಳಂತಿಮೊಗರು ಇವರ ಸ್ವರ್ಣ ಸಂಭ್ರಮಾಚರಣೆಯ ನೆನಪಲ್ಲಿ ಯಕ್ಷ ಶ್ರೀಹರಿ ತಂಡ ಮಂಗಳೂರು ತಂಡದ ವತಿಯಿಂದ ಹಾಗೂ ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ವತಿಯಿಂದ ಗೌರವಾರ್ಪಣೆ ಜರಗಿತು. ಹರೀಶ್ ಬಳಂತಿಮೊಗರು ಸಭಾಕಾರ್ಯಕ್ರಮ ನಿರ್ವಹಿಸಿದರು. ಬಳಿಕ ಯಕ್ಷ ಶ್ರೀಹರಿ ತಂಡ ಮಂಗಳೂರು ಅವರಿಂದ ಗುರು ಕಾರುಣ್ಯ ತಾಳಮದ್ದಳೆ ಜರಗಿತು.