ಸಂಸದೀಯ ಸಮಿತಿ ಸಭೆಯಲ್ಲಿ ಮಾತನಾಡಿರುವ ಟ್ರಸ್, 'ರಕ್ಷಣಾ ವ್ಯವಸ್ಥೆ ಮತ್ತು ಆರ್ಥಿಕ ವಿಚಾರಗಳಲ್ಲಿ ರಷ್ಯಾದ ಮೇಲೆ ಒಂದು ಹಂತದ ಅವಲಂಬನೆ ಹೊಂದಿರುವುದು ಭಾರತದ ಸಮಸ್ಯೆಯಾಗಿರಬಹುದು. ರಷ್ಯಾ ವಿರುದ್ಧ ವಿಶ್ವಸಂಸ್ಥೆಯಲ್ಲಿ ಕೈಗೊಳ್ಳಲಾಗಿರುವ ನಿರ್ಣಯದ ಪರ ಮತ ಚಲಾಯಿಸುವ ನಿರ್ಧಾರ ಈ ವಿಚಾರದ ಮೇಲೆ ನಿಂತಿದೆ' ಎಂದಿದ್ದಾರೆ.
ಹಾಗೆಯೇ, 'ಭಾರತದ ವಿದೇಶಾಂಗ ಸಚಿವ ಜೈಶಂಕರ್ ಅವರೊಂದಿಗೆ ಮಾತನಾಡಿದ್ದೇನೆ. ಭಾರತವು ರಷ್ಯಾ ವಿರುದ್ಧ ನಿಲ್ಲುವಂತೆ ಉತ್ತೇಜಿಸಿದ್ದೇನೆ' ಎಂದೂ ತಿಳಿಸಿದ್ದಾರೆ.
ಉಕ್ರೇನ್ ಮೇಲಿನ ರಷ್ಯಾದ ಆಕ್ರಮಣವನ್ನು ಖಂಡಿಸಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ (ಮಾ.2 ರಂದು) ನಿರ್ಣಯ ಅಂಗೀಕರಿಸಲಾಗಿದೆ.
ರಷ್ಯಾ ಈ ಕೂಡಲೇ ಸೇನಾ ಕಾರ್ಯಾಚರಣೆಯನ್ನು ನಿಲ್ಲಿಸಬೇಕು, ಸಮಸ್ಯೆಯ ಶಾಂತಿಯುತ ಪರಿಹಾರಕ್ಕಾಗಿ ರಾಜತಾಂತ್ರಿಕ ಮಾರ್ಗ ಅನುಸರಿಸಬೇಕು, ನಾಗರಿಕರನ್ನು ರಕ್ಷಿಸಬೇಕು ಎಂಬ ಅಂಶಗಳನ್ನು ನಿರ್ಣಯದಲ್ಲಿ ಉಲ್ಲೇಖಿಸಲಾಗಿದೆ.
ಒಟ್ಟು 193 ರಾಷ್ಟ್ರಗಳ ಪೈಕಿ 141 ದೇಶಗಳು ನಿರ್ಣಯದ ಪರವಾಗಿ ಮತ ಚಲಾಯಿಸಿವೆ. ರಷ್ಯಾ, ಬೆಲರೂಸ್ ಎರಿಟ್ರಿಯಾ, ಉತ್ತರ ಕೊರಿಯಾ, ಸಿರಿಯಾ ನಿರ್ಣಯದ ವಿರುದ್ಧ ಮತ ಹಾಕಿವೆ.
ಏಷ್ಯಾ ರಾಷ್ಟ್ರಗಳಾದ ಭಾರತ, ಚೀನಾ, ಪಾಕಿಸ್ತಾನ ಸಭೆಯಿಂದ ದೂರ ಉಳಿದು ನಿರ್ಲಿಪ್ತತೆ ಪ್ರದರ್ಶಿಸಿದ್ದವು.