ನವದೆಹಲಿ: ಹಣದುಬ್ಬರ ಮತ್ತಷ್ಟು ಏರಿಕೆಯಾಗಲಿದೆ ಎಂದು ಎಚ್ಚರಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ದೇಶದ ಜನರನ್ನು ರಕ್ಷಿಸಲು ಕೇಂದ್ರ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಶನಿವಾರ ಒತ್ತಾಯಿಸಿದ್ದಾರೆ.
ಹಣದುಬ್ಬರ ಭಾರತೀಯರ ಮೇಲಿನ ತೆರಿಗೆ ಎಂದು ಪ್ರತಿಪಾದಿಸಿರುವ ರಾಹುಲ್ ಗಾಂಧಿ, ರಷ್ಯಾ-ಉಕ್ರೇನ್ ಯುದ್ಧ ಪ್ರಾರಂಭವಾಗುವ ಮೊದಲೇ ದಾಖಲೆ ಪ್ರಮಾಣದ ಬೆಲೆ ಏರಿಕೆಯಿಂದ ಬಡ ಹಾಗೂ ಮಧ್ಯಮ ವರ್ಗದವರು ತತ್ತರಿಸಿದ್ದಾರೆ ಎಂದು ಹೇಳಿದ್ದಾರೆ.
'ಹಣದುಬ್ಬರವು ಮತ್ತಷ್ಟು ಏರಿಕೆಯಾಗಲಿದೆ. ಕಚ್ಚಾ ತೈಲ ಬೆಲೆ ಪ್ರತಿ ಬ್ಯಾರೆಲ್‌ಗೆ 100 ಅಮೆರಿಕನ್ ಡಾಲರ್, ಆಹಾರ ಬೆಲೆ ಶೇ 22ರಷ್ಟು ಏರಿಕೆಯಾಗುವ ಸಾಧ್ಯತೆಯಿದೆ. ಕೋವಿಡ್ ಜಾಗತಿಕ ಪೂರೈಕೆ ಸರಪಳಿಯನ್ನು ಅಡ್ಡಿಪಡಿಸುತ್ತದೆ. ಹಾಗಾಗಿ ಕೇಂದ್ರ ಸರ್ಕಾರವು ಈಗಲೇ ಕಾರ್ಯಪ್ರವೃತರಾಗಿ ಜನರನ್ನು ರಕ್ಷಿಸಬೇಕಿದೆ' ಎಂದು ಟ್ವೀಟ್ ಮಾಡಿದ್ದಾರೆ.