ನವದೆಹಲಿ: ಕೊರೊನಾ ಸೋಂಕು ಜಾಗತಿಕವಾಗಿ ಕಳೆದ ವಾರಕ್ಕೆ ಹೋಲಿಸಿದರೆ ಶೇ. 8ರಷ್ಟು ಹೆಚ್ಚಳ ಆಗಿದೆ. ಮಾರ್ಚ್ 7ರಿಂದ 13ರವರೆಗಿನ ಅವಧಿಯಲ್ಲಿ 1.10 ಕೋಟಿ ಹೊಸ ಕೇಸ್ ಗಳು ಕಂಡುಬಂದಿದ್ದು, 43 ಸಾವಿರ ಜನರು ಸಾವನ್ನಪ್ಪಿದ್ದಾರೆ. ಪಶ್ಚಿಮ ಪೆಸಿಫಿಕ್ ರಾಷ್ಟ್ರಗಳಲ್ಲಿ ಸೋಂಕು ಅಧಿಕವಾಗಿದೆ.
ಅಂದರೆ, ದಕ್ಷಿಣ ಕೊರಿಯಾ ಮತ್ತು ಚೀನಾಗಳಲ್ಲಿ ಶೇ. 25ರಷ್ಟು ಕೇಸ್ ಗಳು ಹಾಗೂ ಶೇ. 27ರಷ್ಟು ಸಾವಿನ ಸಂಖ್ಯೆ ಏರಿದೆ. ಹಾಂಕಾಂಗ್ ಮತ್ತು ಸಿಂಗಾಪುರಗಳಲ್ಲೂ ಸೋಂಕು ತುಸು ಹೆಚ್ಚಳ ಆಗಿದೆ. ಆಫ್ರಿಕಾ ದೇಶಗಳಲ್ಲಿ 12ರಷ್ಟು ಹೊಸ ಕೇಸ್, ಶೇ. 14ರಷ್ಟು ಸಾವು ಏರಿಕೆಯಾಗಿದ್ದರೆ, ಯುರೋಪ್ ನಲ್ಲಿ ಶೇ. 2ರಷ್ಟು ಕೊರೊನಾ ಏರಿಕೆ ಕಂಡಿದೆ ಎಂದು ಡಬ್ಲ್ಯೂಎಚ್ ಒ ವಿವರಿಸಿದೆ.
ದಕ್ಷಿಣ ಕೊರಿಯಾದಲ್ಲಿ ಆರು ಲಕ್ಷ ಹೊಸ ಕೇಸ್:
ದಕ್ಷಿಣ ಕೊರಿಯಾದಲ್ಲಿ ಸೋಂಕಿನ ಏರಿಕೆ ಕಳವಳಕಾರಿಯಾಗಿದೆ. ಗುರುವಾರ ಆರು ಲಕ್ಷ ಹೊಸ ಕೇಸ್ ಗಳು ಈ ದೇಶದಲ್ಲಿ ವ್ಯಕ್ತವಾಗಿದೆ. ಆದರೆ, ಸಾವಿನ ಪ್ರಮಾಣ ಕಡಿಮೆ ಇದೆ. ಸೋಂಕು ಉಲ್ಬಣಗೊಂಡಿರುವ ಹಿನ್ನೆಲೆಯಲ್ಲಿ ಬಿಗಿ ಕ್ರಮಗಳನ್ನು ಸರ್ಕಾರ ಕೈಗೊಂಡಿದೆ. ಟೆಸ್ಟ್ ಗಳ ಸಂಖ್ಯೆಯನ್ನು ಹೆಚ್ಚಿಸಲಾಗಿದೆ. ಸಾಂಕ್ರಾಮಿಕವು ತಗ್ಗಿದ್ದ ಹಿನ್ನಲೆಯಲ್ಲಿ ಕೆಲವು ಪ್ರಾಂತ್ಯದಲ್ಲಿ ಟೆಸ್ಟಿಂಗ್ ನಿಲ್ಲಿಸಲಾಗಿತ್ತು. ದೇಶದಲ್ಲಿ ಶೇ. 88ರಷ್ಟು ಅರ್ಹರು ಲಸಿಕೆ ಪಡೆದಿದ್ದಾರೆ. ಜಾಗತಿಕವಾಗಿ ಹೋಲಿಸದರೆ ಮೂರನೇ ಡೋಸ್ ಪಡೆದವರ ಸಂಖ್ಯೆ ಕೂಡ ದಕ್ಷಿಣ ಕೊರಿಯಾದಲ್ಲಿ ಹೆಚ್ಚಿದೆ. ಇದರಿಂದಾಗಿ ಇಲ್ಲಿ ಸಾವಿನ ಪ್ರಮಾಣ ಶೇ. 0.14 ಇದೆ ಎಂದು ಆರೋಗ್ಯ ಇಲಾಖೆ ಹೇಳಿದೆ.
ಇಸ್ರೇಲ್ ನಲ್ಲಿ ಹೊಸ ತಳಿ ಪತ್ತೆ:
ಇಸ್ರೇಲ್ ನಲ್ಲಿ ಕೋವಿಡ್ ಸೋಂಕಿನ ಹೊಸ ತಳಿ ಪತ್ತೆಯಾಗಿದ್ದು, ಇದು ಒಮಿಕ್ರಾನ್ ನ ಉಪತಳಿಯಗಳಾದ ಬಿಎ.1 ಮತ್ತು ಬಿಎ. 2 ಪ್ರಭೇದ ಮಿಶ್ರವಾಗಿದೆ. ಹೊಸ ತಳಿಯ ಎರಡು ಪ್ರಕರಣಗಳು ವರದಿಯಾಗಿದ್ದು, ಜಾಗತಿಕ ಮಟ್ಟದಲ್ಲಿ ಇಂಥ ತಳಿ ಇನ್ನು ವರದಿಯಾಗಿಲ್ಲವಾದ ಕಾರಣ ಇದನ್ನು 'ರಹಸ್ಯ ತಳಿ' ಅಥವಾ 'ಕನ್ಸರ್ನ್' ಎನ್ನಲಾಗಿದೆ. ಹೊಸ ತಿಳಿಯ ಸೋಂಕು ದೃಢಪಟ್ಟವರಲ್ಲಿ ಲಘು ಸ್ವರೂಪದ ಕೊರೊನಾ ಗುಣಲಕ್ಷಣಗಳು ಕಂಡಿವೆ. ಜ್ವರ, ತಲೆ ನೋವು, ಸ್ನಾಯು ಸೆಳೆತಗಳು ಕಾಣಿಸಿಕೊಂಡಿದೆ. ಇದಕ್ಕೆ ಹೆಚ್ಚಿನ ಚಿಕಿತ್ಸೆ ಅಗತ್ಯವಿಲ್ಲ. ಈಗಾಗಲೇ ರೂಢಿಯಲ್ಲಿರುವ ಚಿಕಿತ್ಸೆಯನ್ನೇ ನೀಡಲಾಗುತ್ತಿದೆ ಎಂದು ಇಸ್ರೇಲ್ ನ ಆರೋಗ್ಯ ಸಚಿವಾಲಯ ಬುಧವಾರ ಹೇಳಿಕೆಯಲ್ಲಿ ತಿಳಿಸಿದೆ. ಹೊಸ ಪ್ರಭೇದದ ಬಗ್ಗೆ ಡಬ್ಲ್ಯೂಎಚ್ ಒ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಭಾರತದಲ್ಲಿ ಎರಡೂವರೆ ಸಾವಿರ ಕೇಸ್: ಗುರುವಾರ ಬೆಳಗ್ಗೆ ಕೊನೆಗೊಂಡ 24 ತಾಸಿನಲ್ಲಿ ದೇಶದಲ್ಲಿ 2,539 ಹೊಸ ಪ್ರಕರಣಗಳು ದೃಢಪಟ್ಟಿದ್ದು, 60 ಮಂದಿ ಸಾವನ್ನಪ್ಪಿದ್ದಾರೆ. ಇದರಿಂದ ಸತ್ತವರ ಸಂಖ್ಯೆ 5,16,132ಕ್ಕೆ ಏರಿದೆ. 4,491 ಮಂದಿ ಗುಣಮುಖರಾಗಿದ್ದು, ಇದರಿಂದ 4,24,54,546 ಮಂದಿ ಚೇತರಿಕೆ ಕಂಡಿದ್ದಾರೆ. ಆದರೂ 30,799 ಸಕ್ರಿಯ ಪ್ರಕರಣ ಇದ್ದು, ಇದರ ಪ್ರಮಾಣ ಶೇ. 0.07 ಆಗಿದೆ. ಈ ಮಧ್ಯೆ, 180.80 ಕೋಟಿ ಜನ ಲಸಿಕೆ ಪಡೆದಿದ್ದಾರೆಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.
ಭಾರತದತ್ತ ವಿಶ್ವದ ದೃಷ್ಟಿ:
ಕೋವಿಡ್ ಸಂಖ್ಯೆ ಕಡಿಮೆ ಆಗುತ್ತಿರುವ ಹಿನ್ನೆಲೆಯಲ್ಲಿ ಹೊಸ ಕ್ರಮಕ್ಕೆ ಅನುವಾಗಲು ವಿಶ್ವ ಭಾರತದತ್ತ ನೋಡುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಕೋವಿಡ್ ಸಾಂಕ್ರಾಮಿಕ ತಂದ ಉಪಟಳವನ್ನು ಜಗತ್ತು ಕಂಡಿದೆ. ಈಗ ಪರಿಸ್ಥಿತಿ ಸುಧಾರಿಸುತ್ತಿರುವ ಹಿನ್ನೆಲೆಯಲ್ಲಿ ಜಗತ್ತು ಹೊಸ ಕ್ರಮಕ್ಕೆ ಅನುವಾಗುತ್ತಿದೆ. ಆದರೆ, ಭಾರತದಲ್ಲಿ ಇದು ವೇಗವಾಗಿ ನಡೆಯುತ್ತಿದೆ. ಆದ್ದರಿಂದ ಜಗತ್ತು ಭಾರತದತ್ತ ಚಿತ್ತ ಹರಿಸಿದೆ ಎಂದು ಲಾಲ್ ಬಹಾದೂರ್ ಶಾಸ್ತ್ರಿ ರಾಷ್ಟ್ರೀಯ ಆಡಳಿತ ಅಕಾಡೆಮಿಯ 96ನೇ ಕಾಮನ್ ಫೌಂಡೇಷನ್ ಕೋರ್ಸ್ ನ ಸಮಾರೋಪ ಸಮಾರಂಭದಲ್ಲಿ ತಿಳಿಸಿದರು.
ಜರ್ಮನಿಯಲ್ಲಿ ಲಸಿಕೆ ಕಡ್ಡಾಯ?
ಜರ್ಮನಿಯಲ್ಲಿ ಕಳೆದ 24 ತಾಸಿನಲ್ಲಿ 2,94,931 ಹೊಸ ಕೇಸ್ ಪತ್ತೆಯಾಗಿದ್ದು, 278 ಮಂದಿ ಸಾವನ್ನಪ್ಪಿದ್ದಾರೆ ಎಂದು ದಿ ರಾಬರ್ಟ್ ಕೋಚ್ ಸಂಸ್ಥೆ ಹೇಳಿದೆ. ಈ ಮಧ್ಯೆ, ದೇಶದಲ್ಲಿ ಲಸಿಕೆ ಕಡ್ಡಾಯಗೊಳಿಸುವ ಬಗ್ಗೆ ಸಂಸತ್?ನಲ್ಲಿ ಚರ್ಚೆ ನಡೆಯುತ್ತಿದ್ದು, ಅಂತಿಮ ಹಂತಕ್ಕೆ ಬಂದಿದೆ. 50 ವರ್ಷ ಮೇಲ್ಪಟ್ಟವರಿಗೆ ಮಾತ್ರ ಲಸಿಕೆ ಕಡ್ಡಾಯ ಮಾಡಿದರೆ ಸಾಕು ಎಂಬುದು ವಿರೋಧ ಪಕ್ಷಗಳ ಆಗ್ರಹವಾಗಿದೆ. ಆದರೆ, ಸೋಂಕು ಏರುಗತಿಯಲ್ಲಿರುವ ಕಾರಣ ನೆರೆ ಇತರ ದೇಶಗಳಂತೆ ಎಲ್ಲರಿಗೂ ಲಸಿಕೆ ಕಡ್ಡಾಯ ಮಾಡುವುದು ಸೂಕ್ತ ಮತ್ತು ಭಾನುವಾರಕ್ಕೆ ಕೊನೆಗೊಳ್ಳಲಿದೆ. ಇದನ್ನು ಮುಂದುವರಿಸುವ ಬಗ್ಗೆ ಸ್ಥಳೀಯ ಆದ್ಯತೆಯನ್ನು ಪರಿಗಣಿಸಿ 16 ಪ್ರಾಂತ್ಯಗಳ ಆಡಳಿತಗಳು ನಿರ್ಧಾರ ಕೈಗೊಳ್ಳಲಿ ಎಂದು ಫೆಡರಲ್ ಸರ್ಕಾರ ಹೇಳಿದೆ.
3 ಲಕ್ಷಕ್ಕೂ ಹೆಚ್ಚು ಮಕ್ಕಳಿಗೆ ಲಸಿಕೆ:
ಭಾರತದಲ್ಲಿ 12ರಿಂದ 14 ವರ್ಷದೊಳಗಿನ ಮೂರು ಲಕ್ಷಕ್ಕೂ ಹೆಚ್ಚು ಮಕ್ಕಳಿಗೆ ಗುರುವಾರ ಲಸಿಕೆ ನೀಡಲಾಗಿದೆ. ಈ ಗುಂಪಿನ ಮಕ್ಕಳಿಗೆ ಲಸಿಕೆಯನ್ನು ಬುಧವಾರದಿಂದ ನೀಡಲಾಗುತ್ತಿದೆ. ದೇಶದಲ್ಲಿ 4.70 ಕೋಟಿ ಮಕ್ಕಳು ಈ ಗುಂಪಿನವರಾಗಿದ್ದಾರೆ. 60 ವರ್ಷ ಮೇಲ್ಪಟ ಎಲ್ಲರಿಗೂ ಬುಧವಾರದಿಂದ 3ನೇ ಡೋಸ್ ನೀಡಲಾಗುತಿದೆ. ಇದುವರೆಗೆ ಆರೋಗ್ಯ ಕ್ಷೇತ್ರದ ವಾರಿಯರ್ಸ್ ಮತ್ತು ಕೋವಿಡ್ ತುರ್ತು ಸೇವೆಯ ಮುಂಚೂಣಿ ಕಾರ್ಯಕರ್ತರು ಹಾಗೂ ಅನ್ಯವ್ಯಾಧಿಯಿಂದ ಬಳಲುತ್ತಿರುವ 60 ವರ್ಷ ಮೇಲ್ಪಟ್ಟವರು ಸೇರಿ 2.15 ಕೋಟಿ ಮಂದಿ ಮೂರನೇ ಡೋಸ್ ಲಸಿಕೆ ಪಡೆದಿದ್ದಾರೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.
ಒಮಿಕ್ರಾನ್ ಪ್ರಭೇದವನ್ನು ದೇಶ ನಿಯಂತ್ರಿಸಿದ ಬಗೆಯು ಇತರ ದೇಶಗಳಿಗೆ ಆದರಿಯಾಗಿದೆ. ರಾಜಕೀಯ ಇಚ್ಛಾಶಕ್ತಿ, ಸ್ವಾವಲಂಬಿ ತಂತ್ರಜ್ಞಾನಗಳ ಸಹಕಾರ, ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ತುರ್ತು ಸ್ಪಂದನೆಯ ಮೂಲಕ ಇದನ್ನು ಸಾಧಿಸಲಾಗಿದೆ.
ಮನಸುಖ್ ಮಾಂಡವೀಯ ಕೇಂದ್ರ ಆರೋಗ್ಯ ಸಚಿವ