ತಿರುವನಂತಪುರಂ: ಅನಾರೋಗ್ಯದ ಸಾಕುಪ್ರಾಣಿಗಳನ್ನು ಮಾಲೀಕರು ತ್ಯಜಿಸಿದ ಹಲವಾರು ನಿದರ್ಶನಗಳು ವರದಿಯಾಗಿರುವ ಸಮಯದಲ್ಲಿ, 27 ವರ್ಷದ ಎಚ್‌ಎಂ ಗ್ರೀಷ್ಮಾ ಇದಕ್ಕೆ ಹೊರತಾಗಿದ್ದಾರೆ.
ತನ್ನ 14 ವರ್ಷದ ಮುದ್ದಿನ ನಾಯಿ, ಟಾಮ್ ಅಕಾ ಟಾಮಿ ಆಯಸ್ಸು ಇನ್ನು ಕೆಲವೇ ದಿನಗಳು ಎಂದು ಅರಿತ ಗ್ರೀಷ್ಮಾ, ಅಮೆರಿಕದ ಉತ್ತರ ಕಾರ್ಲೊನಿಯಾದಿಂದ ಕೇರಳ ರಾಜಧಾನಿಯಲ್ಲಿರುವ ತನ್ನ ಹುಟ್ಟೂರಿಗೆ ಓಡೋಡಿ ಬಂದಿದ್ದಾರೆ. ನಾಯಿ ಸಾಯುವ ಮುನ್ನ 15 ದಿನ ಅದರೊಂದಿಗೆ ಗ್ರೀಷ್ಮಾ ಕಾಲ ಕಳೆದಿದ್ದಾರೆ.
ಟಾಮಿ ಮತ್ತು ಜೆರ್ರಿ ಎಂಬ ಎರಡು ಇಂಡೀ ನಾಯಿ ಮರಿಗಳನ್ನು ನಿವೃತ್ತ ಜಿಲ್ಲಾ ವಿಮಾನ ಅಧಿಕಾರಿ ಜಿ ಹರಿ ಕುಮಾರ್ ಮತ್ತು ಕೆ ಆರ್ ಮಾಯಾ 14 ವರ್ಷಗಳ ಹಿಂದೆ ದತ್ತು ಪಡೆದಿದ್ದರು. ಮರುತೂರ್ಕಡವು ಅವರ ಮನೆಯಲ್ಲಿ ತಮ್ಮ ಮಾನವ ಪೋಷಕರೊಂದಿಗೆ ಸಂತೋಷ ಮತ್ತು ಸಂತೃಪ್ತವಾಗಿ ಅವುಗಳು ಇದ್ದವು.
ಜೆರ್ರಿಗೆ ಐದು ವರ್ಷ ಆದಾಗ ಕಿಡ್ನಿ ವೈಫಲ್ಯಕ್ಕೊಳಗಾಯಿತು. ಕಿಡ್ನಿ ಕಸಿ ಮಾಡುವಂತೆ ಪಶುವೈದ್ಯರು ಸೂಚಿಸಿದಾಗ, ಟಾಮ್‌ಗೆ ತೊಂದರೆಯಾಗುತ್ತದೆ ಎಂಬ ಭಯದಿಂದ ಹರಿಕುಮಾರ್ ಮತ್ತು ಅವರ ಕುಟುಂಬದವರು ಅದಕ್ಕೆ ವಿರೋಧಿಸಿದರು. ಆದರೆ ಟಾಮ್ ತನ್ನ ಒಡಹುಟ್ಟಿದ ನಾಯಿಗೆ ರಕ್ತ ವರ್ಗಾವಣೆಗೆ ಸಹಾಯ ಮಾಡಿತು ಮತ್ತು ಜೆರ್ರಿ ತೆಳ್ಳಗೆ ಮತ್ತು ದುರ್ಬಲವಾಗಿ ಸಾಮಾನ್ಯ ಜೀವನಕ್ಕೆ ಮರಳಿತ್ತು.
ಜೆರ್ರಿ ಮಾರ್ಚ್ 2018 ರವರೆಗೆ ಬದುಕಿತ್ತು. ಇತ್ತೀಚೆಗೆ, ಟಾಮಿಯ ಆರೋಗ್ಯವು ಹದಗೆಟ್ಟಾಗ, ಹರಿ ಕುಮಾರ್ ಅವರು ಉತ್ತರ ಕೆರೊಲಿನಾದ ಚಾರ್ಲೊಟ್‌ನಲ್ಲಿರುವ ಅವರ ಮಗಳು ಗ್ರೀಷ್ಮಾಗೆ ವಿಷಯ ತಿಳಿಸಿದರು. ತನ್ನ ಮುದ್ದಿನ ಸಾಕು ನಾಯಿಯನ್ನು ನೋಡಲು ಎಲ್ಲಾ ಕೆಲಸ ಬದಿಗೊತ್ತಿ ಬಂದಿದ್ದಾಗಿ ಆಕೆ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದರು.
ಟಾಮಿಯೊಂದಿಗೆ 15 ದಿನ ಸಮಯ ಕಳೆದಿದ್ದಕ್ಕೆ ತುಂಬಾ ಸಂತೋಷವಾಯಿತು. ಪಶುವೈದ್ಯರು ಅದಕ್ಕೆ ದಯಾಮರಣ ಮಾಡಲು ಬಯಸಿದ್ದರು. ಆದರೆ ಅದು ಇನ್ನೊಂದಿಷ್ಟು ಕಾಲ ಬದುಕಬೇಕೆಂದು ನಾವು ಬಯಸಿದ್ದೇವು. ನೋವು ಅದಕ್ಕೆ ತೀವ್ರವಾಗಿ ಮುಂದುವರೆದಾಗ ಗುರುವಾರ ಅದು ಕೊನೆಯುಸಿರೆಳೆಯಿತು ಎಂದು ಗ್ರೀಷ್ಮಾ ತಿಳಿಸಿದರು.
ಇದೇ ಬುಧವಾರದಿಂದ ಗ್ರೀಷ್ಮಾ ಭಾರದ ಹೃದಯದೊಂದಿಗೆ ಅಮೆರಿಕಕ್ಕೆ ಮರಳಲಿದ್ದಾರೆ. ತನ್ನ ಮುದ್ದಿನ ನಾಯಿಗಳು ಜೀವನಪೂರ್ತಿ ನೆನಪುಗಳನ್ನು ಬಿಟ್ಟು ಹೋಗಿರುವುದಾಗಿ ಗ್ರೀಷ್ಮಾ ಹೇಳಿಕೊಂಡಿದ್ದಾರೆ.