ಮುಂಬೈ: ಷೇರುಪೇಟೆ ಬುಧವಾರ ವಹಿವಾಟಿನ ಬಳಿಕ ರೆಡ್ ಮಾರ್ಕ್ ನಲ್ಲಿ ಮುಕ್ತಾಯ ಕಂಡಿತು. ಮುಂಬೈ ಷೇರುಪೇಟೆಯ ಸೆನ್ಸೆಕ್ಸ್ 778 ಅಂಕಗಳನ್ನು ಕಳೆದುಕೊಂಡು 55,469 ಕ್ಕೆ ಕೊನೆಗೊಂಡರೆ, ರಾಷ್ಟ್ರೀಯ ಷೇರುಪೇಟೆಯ ನಿಫ್ಟಿ ಸೂಚ್ಯಂಕ 188 ಪಾಯಿಂಟ್‌ಗಳ ಕುಸಿತದೊಂದಿಗೆ 16,606 ಕ್ಕೆ ಕೊನೆಗೊಂಡಿತು.
ವಾರದ ಮೂರನೇ ವಹಿವಾಟಿನ ದಿನವಾದ ಇಂದು ಷೇರು ಮಾರುಕಟ್ಟೆಯು ಕೆಂಪು ಮಾರ್ಕ್‌ನಲ್ಲಿ ಆರಂಭವಾಗಿ ದಿನದ ವಹಿವಾಟಿನ ನಂತರ ಕುಸಿತದೊಂದಿಗೆ ಅಂತ್ಯವಾಯಿತು. ಮಹಾಶಿವರಾತ್ರಿ ಹಬ್ಬದ ನಿಮಿತ್ತ ಮಂಗಳವಾರ ಷೇರುಪೇಟೆ ಬಂದ್ ಆಗಿತ್ತು. ಸೋಮವಾರದ ವಹಿವಾಟಿನ ವೇಳೆ ಬಿಎಸ್‌ಇ ಸೆನ್ಸೆಕ್ಸ್ 389 ಪಾಯಿಂಟ್‌ಗಳ ಏರಿಕೆಯೊಂದಿಗೆ 56,247 ಕ್ಕೆ ಕೊನೆಗೊಂಡರೆ, ಎನ್‌ಎಸ್‌ಇ ನಿಫ್ಟಿ 129 ಪಾಯಿಂಟ್‌ಗಳ ಏರಿಕೆಯೊಂದಿಗೆ 16,787 ಕ್ಕೆ ಕೊನೆಗೊಂಡಿತು.
ಉಕ್ರೇನ್ ಮತ್ತು ರಷ್ಯಾ ಯುದ್ಧದ ಕರಿಛಾಯೆ ಷೇರು ಮಾರುಕಟ್ಟೆ ಮೇಲೆ ಮುಂದುವರಿದಿದೆ. ಇನ್ನೊಂದೆಡೆ ಜಾಗತಿಕ ರಾಷ್ಟ್ರಗಳು ಈ ಯುದ್ಧವನ್ನು ತಡೆಯುವಲ್ಲಿ ವಿಫಲವಾಗುತ್ತಿದೆ. ರಷ್ಯಾ ಮತ್ತು ಉಕ್ರೇನ್ ಮಧ್ಯೆ ಇಂದು ನಡೆಯಲಿರುವ 2ನೇ ಹಂತದ ಮಾತುಕತೆ ಏನಾಗಲಿದೆ ಎಂಬುದರ ಬಗ್ಗೆ ಜಗತ್ತು ಕಾದು ನೋಡುತ್ತಿದೆ. ಮತ್ತೊಂದೆಡೆ ಕಚ್ಚಾ ತೈಲದ ಪ್ರತಿ ಬ್ಯಾರಲ್ ಗೆ ಹೆಚ್ಚಳ ಕಂಡಿದ್ದು, 110 ಡಾಲರ್ ಸಾಮೀಪ್ಯಕ್ಕೆ ಬಂದು ನಿಂತಿದೆ.
ಇದೇ ರೀತಿ ಯುದ್ಧ ಮುಂದೆವರೆದರೆ ಷೇರುಪೇಟೆಯಲ್ಲಿ ಹೂಡಿಕೆದಾರರು ನಿರುತ್ಸಾಹ ತೋರಲಿದ್ದಾರೆ. ಆದರೆ, ಈ ಕುಸಿತವೂ ಭಾರತೀಯರ ಪಾಲಿಗೆ ಒಲಿದು ಬಂದ ಸೌಭಾಗ್ಯವೇ ಎನ್ನಬಹುದು. ಏಕೆಂದರೆ ದುಬಾರಿ ಬೆಲೆಯ ಷೇರುಗಳು ಕೈಗೆಟಕುವ ದರದಲ್ಲಿ ದೊರೆಯುತ್ತಿದ್ದು, ಷೇರುಗಳನ್ನು ಖರೀದಿ ಮಾಡಲು ಇದು ಒಳ್ಳೆಯ ಸಂದರ್ಭ ಎಂದು ಹೂಡಿಕೆ ತಜ್ಞರು ಅಭಿಪ್ರಾಯ ಪಡುತ್ತಿದ್ದಾರೆ.