ಮಂಜೇಶ್ವರ: ದಕ್ಷಿಣ ಕನ್ನಡ ಜಿಲ್ಲೆಯನ್ನು ಅವಲಂಬಿಸಿರುವ ಗಡಿನಾಡಿಗರ ಸಂಘಟನೆಯಾದ ಸಹಯಾತ್ರಿ ತಂಡದ ಸದಸ್ಯರಾದ ಕೃಷ್ಣ ಕಿಶೋರ್, ಲೋಕೇಶ್ ಜೋಡುಕಲ್ಲು, ಶಿವಕೃಷ್ಣ ನಿಡುವಜೆ ಹಾಗೂ ಗಣೇಶ್ ಭಟ್ ವಾರಣಾಸಿ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ,ಮಂಗಳೂರು ಇಲ್ಲಿನ ವಿಭಾಗ ನಿಯಂತ್ರಣಾಧಿಕಾರಿಗಳಾದ ಅರುಣ್ ಅವರನ್ನು ಶುಕ್ರವಾರ ಭೇಟಿಯಾಗಿ ಗಡಿನಾಡಿಗರ ಅನುಕೂಲಕ್ಕಾಗಿ ಉಭಯ ರಾಜ್ಯಗಳ ನಡುವೆ ಓಡಾಡುವ ಕರಾರಸಾಸಂ ಬಸ್ ಸೇವೆಯಲ್ಲಿ ಸುಧಾರಣೆಗಳನ್ನು ತರಲು ಮನವಿಯನ್ನು ಕೊಟ್ಟರು.
ದಕ್ಷಿಣ ಕನ್ನಡ ಜಿಲ್ಲೆಯನ್ನು ಅದರಲ್ಲೂ ಮಂಗಳೂರನ್ನು ಆಶ್ರಯಿಸಿರುವ ಕಾಸರಗೋಡಿಗರ ಸಂಖ್ಯೆ ಬಹಳ ದೊಡ್ಡದಿದ್ದು. ಈಗ ಉಭಯ ಜಿಲ್ಲೆಗಳ ನಡುವೆ ಓಡಾಡುತ್ತಿರುವ ಎರಡೂ ರಾಜ್ಯಗಳ ಸರಕಾರೀ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಗಳು ಬಹು ನಿಲುಗಡೆಯ ಬಸ್ ಗಳಾಗಿವೆ ಉದ್ಯೋಗಿಗಳು ಹಾಗೂ ವಿದ್ಯಾರ್ಥಿಗಳಿಗೆ ಕಚೇರಿ ಹಾಗೂ ತರಗತಿಗಳನ್ನು ಕ್ಲಪ್ತ ಸಮಯದಲ್ಲಿ ತಲುಪಲು ತೊಂದರೆಯಾಗುತ್ತಿದೆ. ಈಗ ಕಾಸರಗೋಡು ಹಾಗೂ ಮಂಗಳೂರು ನಡುವಿನ 50 ಕಿಲೋಮೀಟರ್ ಗಳನ್ನು ಕ್ರಮಿಸುವ ಸಂದರ್ಭದಲ್ಲಿ ಈ ಬಸ್ ಗಳು 35 ನಿಲುಗಡೆಗಳನ್ನು ಮಾಡುತ್ತಿವೆ. ಇದರ ಪರಿಣಾಮವಾಗಿ ಈಗ ಈ 50 ಕಿಲೋಮೀಟರ್ ದೂರವನ್ನು ಕ್ರಮಿಸಲು 100 ನಿಮಿಷಗಳನ್ನು ತೆಗೆದುಕೊಳ್ಳುತ್ತಿವೆ. ಕೆಲವು ಸಂದರ್ಭಗಳಲ್ಲಿ 120 ನಿಮಿಷ (2 ಗಂಟೆ )ಗಳನ್ನು ತೆಗೆದುಕೊಳ್ಳುವುದೂ ಇದೆ. ಈ ನಿಧಾನಗತಿಯ ಪ್ರಯಾಣವು ವಿದ್ಯಾರ್ಥಿಗಳು ಹಾಗೂ ಉದ್ಯೋಗಿಗಳ ಬಹಳಷ್ಟು ಸಮಯವನ್ನು ವ್ಯರ್ಥ ಮಾಡುತ್ತಿದೆ. ಇಂದಿನ ಕ್ಷಿಪ್ರಗತಿಯ ಕಾಲದಲ್ಲೂ ಗಂಟೆಗೆ 30-40 ಕಿಲೋಮೀಟರ್ ಗಳನ್ನು ಮಾತ್ರ ಕ್ರಮಿಸುವ ಸಾರಿಗೆ ವ್ಯವಸ್ಥೆ ವೇಗವನ್ನು ಪಡೆದುಕೊಳ್ಳಬೇಕಾದ ಅವಶ್ಯಕತೆ ಇದೆ. ಈ ಹಿನ್ನೆಲೆಯಲ್ಲಿ ಸಹಯಾತ್ರಿ ತಂಡದ ಸದಸ್ಯರು ಕರ್ನಾಟಕ ರಸ್ತೆ ಸಾರಿಗೆಯ ಮಂಗಳೂರು ವಿಭಾಗ ನಿಯಂತ್ರಣಾಧಿಕಾರಿಗಳನ್ನು ಭೇಟಿಯಾಗಿ ಮಿತ ನಿಲುಗಡೆಯ ಬಸ್ ಸೇವೆ ಆರಂಭಿಸಲು ಮನವಿ ಸಲ್ಲಿಸಿದರು. ಇದಲ್ಲದೆ ನಿತ್ಯ ಪ್ರಯಾಣಿಕರಿಗೆ ಮಾಸಿಕ ಪಾಸ್ ನೀಡಬೇಕು ಮತ್ತು ಉಭಯ ರಾಜ್ಯಗಳ ಸಾರಿಗೆ ಬಸ್ ಗಳಿಗೂ ಅನ್ವಯವಾಗುವಂತೆ ಮಾಡಬೇಕು ಎಂಬುದಾಗಿಯೂ ತಮ್ಮ ಮನವಿ ಸಲ್ಲಿಸಿದರು. ಮನವಿ ಸ್ವೀಕರಿಸಿದ ಅಧಿಕಾರಿಗಳು ವಿದ್ಯಾರ್ಥಿಗಳು, ಹಾಗೂ ಸಾರ್ವಜನಿಕರಿಗೆ ಅನುಕೂಲ ಆಗುವಂತೆ ಬಸ್ ನಿಲುಗಡೆ ಹೆಚ್ಚು ಮಾಡಲಾಗಿದೆ. ಸೀಮಿತ ಬಸ್ ಓಡಾಟ ಮಾಡುವ ಕುರಿತು ಪರಾಮರ್ಶಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದರು
ಕಳೆದ ಕೆಲವು ಸಮಯದ ಹಿಂದೆಯೇ ಮಿತ ನಿಲುಗಡೆ ಬಸ್ ಆರಂಭಿಸಬೇಕೆಂದು ಸಹಯಾತ್ರಿ ತಂಡವು ಣತಿiಣಣeಡಿ ನ ಮೂಲಕ ಕರ್ನಾಟಕ ಹಾಗೂ ಕೇರಳ ಸಾರಿಗೆ ಇಲಾಖೆಗಳಿಗೆ ವಿನಂತಿ ಮಾಡಿದ್ದು ಕರ್ನಾಟಕ ಸಾರಿಗೆ ಇಲಾಖೆಯು ಈ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ಣತಿiಣಣeಡಿ ನಲ್ಲಿ ಪ್ರತಿಕ್ರಿಯಿಸಿತ್ತು.
ಬೇಡಿಕೆಗಳು ಏನೇನು ...
1)ಕಾಸರಗೋಡು ಮಂಗಳೂರಿನ ನಡುವೆ ನಿಜಾರ್ಥದ ಮಿತ ನಿಲುಗಡೆ ಬಸ್ ಸೇವೆಗಳನ್ನು ಪುನರಾರಂಭಿಸಬೇಕು,2)ನಿತ್ಯ ಪ್ರಯಾಣಿಕರಿಗೆ ಮಾಸಿಕ ಪಾಸ್ ಒದಗಿಸಬೇಕು,3)ಉಭಯ ರಾಜ್ಯಗಳ ಸಾರಿಗೆ ಬಸ್ ಗಳಿಗೂ ಅನ್ವಯವಾಗುವಂತೆ ಮಾಸಿಕ ಪಾಸ್ ಗಳನ್ನು ಒದಗಿಸಬೇಕು ಎಂದು ಮನವಿ ಮಾಡಲಾಗಿದೆ.
ಅಭಿಮತ:
ವಿದ್ಯಾರ್ಥಿಗಳು, ಹಾಗೂ ಸಾರ್ವಜನಿಕರಿಗೆ ಅನುಕೂಲ ಆಗುವಂತೆ ಬಸ್ ನಿಲುಗಡೆ ಬಸ್ಸುಗಳನ್ನು ಹೆಚ್ಚು ಮಾಡಲಾಗಿದೆ. ಸೀಮಿತ ಬಸ್ ಓಡಾಟ ಮಾಡುವ ಕುರಿತು ಪರಾಮರ್ಶಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುವುದು.
ಅರುಣ್
ವಿಭಾಗ ನಿಯಂತ್ರಣಾಧಿಕಾರಿ, ಕರಾರಸಾಸಂ, ಮಂಗಳೂರು.