ಲಖನೌ: ಅಸಾದುದ್ದೀನ್ ಒವೈಸಿ ನೇತೃತ್ವದ ಎಐಎಂಐಎಂ ಪಕ್ಷವು ಬಿಜೆಪಿಯ 'ಬಿ' ಟೀಂ ಎಂಬ ಮಾತುಗಳು ಉತ್ತರ ಪ್ರದೇಶ ಚುನಾವಣೆ ಪ್ರಚಾರದ ವೇಳೆ ಕೇಳಿಬಂದಿದ್ದವು. ಚುನಾವಣಾ ಫಲಿತಾಂಶದ ಬಳಿಕ ಅಂಕಿಅಂಶಗಳನ್ನು ಗಮನಿಸಿದರೆ ಕೆಲವು ಕ್ಷೇತ್ರಗಳಲ್ಲಿ ಪ್ರತಿಪಕ್ಷಗಳ ಮತಗಳ ಧ್ರುವೀಕರಣಕ್ಕೆ ಎಐಎಂಐಎಂ ಅಭ್ಯರ್ಥಿಗಳು ಕಾರಣರಾಗಿರುವುದು ತಿಳಿದುಬಂದಿದೆ ಎಂದು 'ಐಎಎನ್‌ಎಸ್' ಸುದ್ದಿಸಂಸ್ಥೆ ವರದಿ ಮಾಡಿದೆ.
ಉತ್ತರ ಪ್ರದೇಶದ ಏಳು ಕ್ಷೇತ್ರಗಳಲ್ಲಿ ಬಿಜೆಪಿ 200 ಮತಗಳ ಅಂತರದಿಂದ ಗೆಲುವು ಸಾಧಿಸಿದೆ. 23 ಕ್ಷೇತ್ರಗಳಲ್ಲಿ 500 ಮತಗಳಿಂದ ಜಯ ಗಳಿಸಿದೆ. 49 ಕ್ಷೇತ್ರಗಳಲ್ಲಿ 1000 ಮತಗಳ ಅಂತರದಿಂದ ಗೆದ್ದಿದೆ. 86 ಕ್ಷೇತ್ರಗಳಲ್ಲಿ 2000 ಮತಗಳಿಂದ ವಿಜಯ ಸಾಧಿಸಿದೆ. ಈ ಎಲ್ಲ ಕ್ಷೇತ್ರಗಳಲ್ಲಿ ಒವೈಸಿ ಪಕ್ಷವು ಗಣನೀಯವಾಗಿ ಮತಗಳನ್ನು ಪಡೆದಿದೆ. ಪ್ರತಿಪಕ್ಷಗಳ ಮತಗಳ ಧ್ರುವೀಕರಣಕ್ಕೆ ಕಾರಣವಾಗಿದೆ ಎಂದು ವರದಿ ಉಲ್ಲೇಖಿಸಿದೆ.
ಬಿಜನೋರ್‌ನಲ್ಲಿ ಎಸ್‌ಪಿ-ಆರ್‌ಎಲ್‌ಡಿ ಮೈತ್ರಿಕೂಟದ ಅಭ್ಯರ್ಥಿಗೆ 95,720 ಮತಗಳು ದೊರೆತಿದ್ದರೆ, ಎಐಎಂಐಎಂ ಅಭ್ಯರ್ಥಿಗೆ 2,290 ಮತಗಳು ದೊರೆತಿವೆ. ಇಲ್ಲಿ ಬಿಜೆಪಿ 97,165 ಮತಗಳನ್ನು ಗಳಿಸಿ 1,445 ಮತಗಳ ಅಂತರದಿಂದ ಗೆದ್ದಿದೆ.
ನಾಕೂರ್‌ನಲ್ಲಿ ಬಿಜೆಪಿಗೆ 1,03,771 ಮತಗಳು ದೊರೆತಿದ್ದರೆ ಎಸ್‌ಪಿಗೆ 1,03,616 ಮತಗಳು ದೊರೆತಿವೆ. ಇಲ್ಲಿ ಎಐಎಂಐಎಂಗೆ 3,591 ಮತಗಳು ದೊರೆತಿವೆ. ಬಾರಾಬಂಕಿಯ ಕುರ್ಸೀ ಕ್ಷೇತ್ರದಲ್ಲಿ ಬಿಜೆಪಿ 1,18,614 ಮತ ಗಳಿಸಿದ್ದರೆ ಎಸ್‌ಪಿ 1,18,094 ಮತ ಗಳಿಸಿದೆ. ಇಲ್ಲಿ ಎಐಎಂಐಎಂಗೆ 8,541 ಮತಗಳು ದೊರೆತಿವೆ.
ಸುಲ್ತಾನಪುರದಲ್ಲಿ ಬಿಜೆಪಿಗೆ 92,245, ಎಸ್‌ಪಿಗೆ 90,857 ಹಾಗೂ ಎಐಎಂಐಎಂಗೆ 5,251 ಮತಗಳು ದೊರೆತಿವೆ. ಔರಾಯಿ ಕ್ಷೇತ್ರದಲ್ಲಿ ಎಐಎಂಐಎಂ 2,190 ಮತಗಳು ದೊರೆತಿವೆ. ಇಲ್ಲಿ ಬಿಜೆಪಿ 93,691 ಮತ ಗಳಿಸಿದ್ದರೆ, ಎಸ್‌ಪಿ 92,044 ಮತ ಗಳಿಸಿದೆ.
ಶಾಹ್‌ಗಂಜ್‌ನಲ್ಲಿ 76,035 ಮತ ಗಳಿಸಿ ಬಿಜೆಪಿ ಗೆಲುವು ಸಾಧಿಸಿದೆ. ಈ ಕ್ಷೇತ್ರದಲ್ಲಿ ಎಸ್‌ಪಿ 70,370 ಮತಗಳನ್ನು ಪಡೆದಿದ್ದರೆ, ಎಐಎಂಐಎಂ 7,070 ಮತಗಳನ್ನು ಪಡೆದಿದೆ.
ಫಿರೋಜಾಬಾದ್‌ನಲ್ಲಿ 1,12,509 ಮತ ಪಡೆದು ಬಿಜೆಪಿ ಗೆಲುವು ದಾಖಲಿಸಿದ್ದರೆ, ಎಸ್‌ಪಿಗೆ 79,554 ಮತಗಳು ದೊರೆತಿವೆ. ಈ ಕ್ಷೇತ್ರದಲ್ಲಿ ಎಐಎಂಐಎಂ ಪರ ದಾಖಲಾದ ಮತಗಳ ಸಂಖ್ಯೆ 18,898.