HEALTH TIPS

ಮಲಯಾಳಿ ಶಿಕ್ಷಕನ ಬೋಧನೆಗೆ ಅವಕಾಶ ನೀಡಲಾಗದು: ಅಂಗಡಿಮೊಗರು ಶಾಲೆಯಲ್ಲಿ ಶಿಕ್ಷಕ ನೇಮಕಾತಿ ವಿರುದ್ಧ ಸಿಡಿದೆದದ್ದ ಹೆತ್ತವರು, ವಿದ್ಯಾರ್ಥಿಗಳು

                                  

            ಕುಂಬಳೆ: ಗಡಿನಾಡು ಕಾಸರಗೋಡಿನ ಭಾಷಾ ಅಲದಪಸಂಖ್ಯಾತ ಕನ್ನಡಿಗರ ಸಾಂವಿಧಾನಿಕ ಹಕ್ಕಿನ ಉಲ್ಲಂಘನೆ ನಿರಂತರವಾಗುತ್ತಿದ್ದು, ಪ್ರತಿನಿತ್ಯ ಹೋರಾಟದ ಮೂಲಕವೇ ಎಲ್ಲವನ್ನೂ ಸಾಧಿಸಬೇಕೆಂಬ ತುರ್ತು ನಿರಂತರವಾಗಿದೆ.

               ಅಂಗಡಿಮೊಗರು ಸರ್ಕಾರಿ ಪ್ರೌಢಶಾಲೆಯ ಕನ್ನಡ ಭೌತಶಾಸ್ತ್ರ ವಿಭಾಗಕ್ಕೆ ಮಲಯಾಳ ಮಾಧ್ಯಮ ಶಿಕ್ಷಕನ ನೇಮಕಕ್ಕೆ ಅವಕಾಶ ನೀಡುವುದಿಲ್ಲ ಎಂಬುದಾಗಿ ಶಾಲೆಯ ರಕ್ಷಕ ಶಿಕ್ಷಕ ಸಂಘ ಪದಾಧಿಕಾರಿಗಳು, ವಿದ್ಯಾರ್ಥಿಗಳ ಹೆತ್ತವರು ಹಾಗೂ ಊರವರು ಒಕ್ಕೊರಲಿಂದ ಘೋಷಿಸಿದರು. ಕನ್ನಡ ಮಾಧ್ಯಮಕ್ಕೆ ಮಲಯಾಳಿ ಶಿಕ್ಷಕನ ನೇಮಕಾತಿ ವಿರುದ್ಧ ಕನ್ನಡ ಮಾಧ್ಯಮ ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ, ಘೋಷಣಾವಾಕ್ಯ ಹಿಡಿದು ಪ್ರತಿಭಟನಾ ಮೆರವಣಿಗೆಯಲ್ಲಿ ಪಾಲ್ಗೊಂಡರು. 'ನಮಗೆ ಕನ್ನಡದಲ್ಲೇ ಪಾಠ ಬೇಕು, ನಮ್ಮ ಭಾಷೆ ಕನ್ನಡ, ಕನ್ನಡ ತಾಯಿಯ ಮಕ್ಕಳು ನಾವು, ಕನ್ನಡ ಶಾಲೆಗಳ ಮುಚ್ಚಲಿರುವ ಹುನ್ನಾರವಿದು-ಬಿಡಲ್ಲ ಬಿಡಲ್ಲ ಜೀವ ಹೋದರೂ ಬಿಡಲ್ಲ' ಮುಂತಾದ ಘೋಷಣೆ ಹೊಂದಿದ ಪ್ಲಕ್ಕಾರ್ಡ್ ಹಿಡಿದು ಶಾಲೆಯಿಂದ ಅಂಗಡಿಮೊಗರು ಪೇಟೆ ವರೆಗೆ ಮೆರವಣಿಗೆಯಲ್ಲಿ ಸಾಗಿದರು.


              ಕನ್ನಡ ಹೋರಾಟ ಸಮಿತಿ ಜಿಲ್ಲಾ ಕಾರ್ಯದರ್ಶಿ ಕೆ. ಭಾಸ್ಕರ ಧರಣಿ ಉದ್ಘಾಟಿಸಿ ಮಾತನಾಡಿ, ಇದು ಭಾಷೆಯ ನಡುವಿನ ಹೋರಾಟವಲ್ಲ. ಕನ್ನಡ ಮಾಧ್ಯಮ ವಿದ್ಯಾರ್ಥಿಗಳ ಅಳಿವು-ಉಳಿವಿನ ಪ್ರಶ್ನೆಯಾಗಿದೆ. ಮಲಯಾಳ ನಮ್ಮ ಸಹೋದರ ಭಾಷೆ. ಮಲಯಾಳಿಗರು ನಮ್ಮ ಸಹೋದರರಿದ್ದಂತೆ. ಆದರೆ ಗಡಿನಾಡು ಕಾಸರಗೋಡಿನಲ್ಲಿ ಸಂವಿಧಾನತ್ಮಕ ಹಕ್ಕಿನ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ಕಂಡು ಕಣ್ಮುಚ್ಚಿಕುಳಿತುಕೊಳ್ಳಲು ಸಾಧ್ಯವಿಲ್ಲ. ಕನ್ನಡ ಅರಿಯದ ಶಿಕ್ಷಕನ ನೇಮಕಾತಿ, ಕನ್ನಡ ಮಾಧ್ಯಮ ವಿದ್ಯಾರ್ಥಿಗಳ ಮೇಲೆ ಹೆಚ್ಚಿನ ದುಷ್ಪರಿಣಾಮ ಬೀರಲಿದೆ. ಇದು ಭಾಷಾ ಅಲ್ಪಸಂಖ್ಯಾತರ ಸಂವಿಧಾನಾತ್ಮಕ ಹಕ್ಕಿನ ಸ್ಪಷ್ಟ ಉಲ್ಲಂಘನೆಯಾಗಿದೆ. ಶಿಕ್ಷಕನ ನೇಮಕಾತಿ ವಿಚಾರದಲ್ಲಿ ಮಕ್ಕಳು, ಹೆತ್ತವರು ಬೀದಿಗಿಳಿದು ಧರಣಿ ನಡೆಸಬೇಕಾಗಿರುವುದು ವಿಪರ್ಯಾಸ. ಈಗಾಗಲೇ ಲಿಸ್ಟಿನಲ್ಲಿರುವ ಶಿಕ್ಷಕರನ್ನು ಬೇರೆ ಇಲಾಖೆಗೆ ವರ್ಗಾಯಿಸಿ, ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಕನ್ನಡ ಶಿಕ್ಷಕರನ್ನು ನೇಮಿಸುವಂತೆ ಅವರು ಆಗ್ರಹಿಸಿದರು.

             ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಬಶೀರ್ ಕೊಟ್ಟೂಡಲ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಇಂತಹ ನೇಮಕಾತಿ ಭಾಷಾ ಸೌಹಾರ್ದತೆಗೆ ಧಕ್ಕೆಯಾಗಲಿದ್ದು, ಮಕ್ಕಳ ವಿದ್ಯಾಭ್ಯಾಸದ ಮೇಲೆಯೂ ದುಷ್ಪರಿಣಾಮ ಬೀರಲಿದೆ. ಈ ಬಗ್ಗೆ ಸ್ಪಷ್ಟ ತೀರ್ಮಾನಕ್ಕೆ ಬರಬೇಕಾದ ಅಗತ್ಯವಿದೆ ಎಂದು ತಿಳಿಸಿದರು. ಪುತ್ತಿಗೆ ಗ್ರಾಪಂ ಸದಸ್ಯೆ, ಶಾಲಾ ಮದರ್ ಪಿಟಿಎ ಅಧ್ಯಕ್ಷೆ ಅನಿತಾ ಎಂ, ಸತೀಶ್ ರೈ, ತ್ಯಾಂಪಣ್ಣ ರೈ ಮುಂತಾದವರು ಉಪಸ್ಥಿತರಿದ್ದರು. ಪೃಥ್ವೀರಾಜ್ ಪ್ರಾಸ್ತಾವಿಕ ಮಾತುಗಳನ್ನಾಡಿ, ಸ್ವಾಗತಿಸಿದರು. ಗ್ರಾಪಂ ಮಾಜಿ ಸದಸ್ಯ ಆನಂದ ಎಂ.ಕೆ ವಂದಿಸಿದರು.


                            ಶಾಲೆಗೆ ಹಾಜರಾಗದ ಶಿಕ್ಷಕ:

              ಕನ್ನಡ ಮಾಧ್ಯಮಕ್ಕೆ ಮಲಯಾಳಿ ಶಿಕ್ಷಕನ ನೇಮಕಾತಿ ವಿರುದ್ಧ ಶಾಲೆಯಲ್ಲಿ ನಡೆಯುತ್ತಿರುವ ಪ್ರತಿಭಟನೆ ಹಿನ್ನೆಲೆಯಲ್ಲಿ  ಶಿಕ್ಷಕ ಇದುವರೆಗೆ ಶಾಲೆಗೆ ಕರ್ತವ್ಯಕ್ಕೆ ಹಾಜರಾಗಿಲ್ಲ. ಶಿಕ್ಷಕನಿಗೆ ಮಾ. 4ರಂದು ನೇಮಕಾತಿ ಆದೇಶ ಲಭಿಸಿದ್ದು, ಶಾಲೆಯಲ್ಲಿ ನಿರಂತರ ನಡೆಯುತ್ತಿರುವ ಪ್ರತಿಭಟನೆಯಿಂದ ಹಿಂದೆ ಸರಿದಿರಬೇಕೆಂದು ಸಂಶಯಿಸಲಾಗಿದೆ. ಕನ್ನಡ ಮಾಧ್ಯಮಕ್ಕೆ ಮಲಯಾಳಿ ಶಿಕ್ಷಕನಿಗೆ ಬೋಧನೆಗೆ ಅವಕಾಶ ನೀಡುವುದಿಲ್ಲ ಎಂಬುದಾಗಿ ಪ್ರತಿಭಟನಾಕಾರರು ತಿಳಿಸಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries