ರಿಫಾ ಸಾವಿನ ಹಿಂದೆ ಏನೋ ಅನ್ಯಾಯ ನಡೆದಿದೆ ಎಂದು ಆರೋಪಿಸಿರುವ ಕುಟುಂಬ ಬಹುಶಃ ಆಕೆ ಕೌಟುಂಬಿಕ ಕಲಹದ ಸಂತ್ರಸ್ತೆಯಾಗಿರಬಹುದು ಎಂದು ಸಂಶಯ ವ್ಯಕ್ತಪಡಿಸಿದ್ದಾರೆ. ಆದರೆ, ಇದನ್ನು ರಿಫಾ ಪತಿ ಮತ್ತು ಆಕೆಯ ಅತ್ತೆ ಮನೆಯವರು ಆರೋಪವನ್ನು ಅಲ್ಲಗೆಳೆದಿದ್ದಾರೆ. ಅಲ್ಲದೆ, ಮರಣೋತ್ತರ ಪರೀಕ್ಷೆಯ ವರದಿಗಳನ್ನು ಉಲ್ಲೇಖಿಸಿ, ಇದು ಆತ್ಮಹತ್ಯೆ ಎಂದು ಹೇಳಿದ್ದಾರೆ.
ರಿಫಾ ಮತ್ತು ಪತಿಯ ನಡುವಿನ ಸಂಬಂಧ ಹದಗೆಟ್ಟಿತ್ತು ಎಂದು ಆಕೆಯ ಆಪ್ತರು ಹೇಳಿದ್ದಾರೆ. ಕುಟುಂಬದ ಆದಾಯ ಖರ್ಚು ಮಾಡುವ ವಿಚಾರದಲ್ಲಿ ಇಬ್ಬರ ನಡುವೆ ಜಗಳವಾಗಿತ್ತು ಎಂದು ಹೇಳಲಾಗಿದೆ. ರಿಫಾ ಸಾವಿಗೆ ಪ್ರಚೋದನೆ ನೀಡಲಾಗಿದ್ದು, ಪತಿಯನ್ನು ಈ ಕ್ಷಣ ವಿಚಾರಣೆಗೆ ಒಳಪಡಿಸಬೇಕು ಎಂದು ರಿಫಾ ಆಪ್ತರು ಮತ್ತು ಕುಟುಂಬಸ್ಥರು ಒತ್ತಾಯಿಸಿದ್ದಾರೆ.
ಅಂದಹಾಗೆ ರಿಫಾ, ಕೇರಳದ ಕೊಯಿಕ್ಕೋಡ್ ನಗರದ ಬಲುಸ್ಸೆರಿ ಮೂಲದ ನಿವಾಸಿ. ದುಬೈನ ಜಫ್ಫಿಲಿಯಾದಲ್ಲಿರುವ ಫ್ಲ್ಯಾಟ್ನಲ್ಲಿ ಮಾರ್ಚ್ 1ರಂದು ಶವವಾಗಿ ಪತ್ತೆಯಾಗಿದ್ದರು. ತಮ್ಮ ಪತಿ ಮೆಹ್ನೋವ್ ಮತ್ತು ಮಗಳ ಜತೆ ದುಬೈನಲ್ಲಿ ನೆಲೆಸಿದ್ದರು. ಸಾವಿಗೆ ಇನ್ನೂ ಕಾರಣ ತಿಳಿದುಬಂದಿಲ್ಲ. ಆದರೆ, ಪತಿಯ ಮನೆಯವರು ಆತ್ಮಹತ್ಯೆ ಎಂದರೆ, ರಿಫಾ ಪಾಲಕರು ಮತ್ತು ಆಪ್ತರು ಸಂಶಯ ವ್ಯಕ್ತಪಡಿಸಿದ್ದಾರೆ.
ರಿಫಾ ಅವರು ಆಹಾರ ಮತ್ತು ಫ್ಯಾಶನ್ ಬಗ್ಗೆ ವಿಡಿಯೋಗಳನ್ನು ಮಾಡುತ್ತಿದ್ದರು. ಕೇರಳದಲ್ಲಿ ತುಂಬಾ ಪ್ರಸಿದ್ಧಿಯನ್ನು ಪಡೆದಿದ್ದರು. ಸದಾ ಸಾಮಾಜಿಕ ಜಾಲತಾಣದಲ್ಲಿ ರಿಫಾ ಬಿಜಿಯಾಗಿರುತ್ತಿದ್ದರು. ಸಾವಿಗೂ ಕೆಲವು ಕ್ಷಣಗಳ ಹಿಂದೆಯೂ ಆಕೆ ಜಾಲತಾಣದಲ್ಲಿ ಸಕ್ರೀಯರಾಗಿದ್ದರು. ರಿಫಾ ಇನ್ಸ್ಟಾಗ್ರಾಂ ಪೇಜ್ನಲ್ಲಿ ಬರೋಬ್ಬರಿ 3 ಲಕ್ಷಕ್ಕೂ ಅಧಿಕ ಹಿಂಬಾಲಕರನ್ನು ಹೊಂದಿದ್ದಾರೆ.
ಯುಎಇಯ ಜನಪ್ರಿಯ ಹೋಟೆಲ್‌ನಲ್ಲಿ ರಿಫಾ ಮತ್ತು ಅವರ ಪತಿ ಆಹಾರವನ್ನು ತಿನ್ನುತ್ತಿರುವ ಅವರ ಕೊನೆಯ ವಿಡಿಯೋಗೆ ಸಿಕ್ಕಾಪಟ್ಟೆ ಕಾಮೆಂಟ್‌ಗಳು ಹರಿದು ಬರುತ್ತಿವೆ. ರಿಫಾ ಕಳೆದುಕೊಂಡ ಕುಟುಂಬ ದುಃಖ ಸಾಗರದಲ್ಲಿ ಮುಳುಗಿದೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ತನಿಖೆಯ ನಂತರ ಸಾವಿಗೆ ಕಾರಣ ಏನೆಂದು ತಿಳಿದುಬರಲಿದೆ.