ನವದೆಹಲಿ: ರಷ್ಯಾ ವಿರುದ್ಧ ನಡೆಯಲು ಭಾರತಕ್ಕೆ ಅಸ್ಥಿರತೆ, ಭಯ ಕಾಡುತ್ತಿದೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಹೇಳಿದ್ದ ಬೆನ್ನಲ್ಲೇ ಅಮೆರಿಕ ಅಧಿಕಾರಿಗಳು ಭಾರತ ತಮಗೆ ಅತ್ಯಂತ ಪ್ರಮುಖ ಪಾಲುದಾರ ಮಿತ್ರ ರಾಷ್ಟ್ರ ಎಂದು ಹೇಳಿದ್ದಾರೆ.
ಕ್ವಾಡ್ ನಲ್ಲಿ ಭಾರತದ ಸ್ಥಾನದ ಪ್ರಕಾರ, ಕ್ವಾಡ್ ಪರಿಭಾಷೆಯಲ್ಲಿ ನಮ್ಮ ಹಾಗೂ ಭಾರತದ ಸಂಬಂಧದ ದೃಷ್ಟಿಯಿಂದ ಹಾಗೂ ದ್ವಿಪಕ್ಷೀಯ ದೃಷ್ಟಿಯಿಂದ, ಸ್ವತಂತ್ರ ಹಾಗೂ ಮುಕ್ತ ಇಂಡೋ ಪೆಸಿಫಿಕ್ ನ ದೂರದೃಷ್ಟಿಯ ಯೋಜನೆಯ ಭಾಗವಾಗಿ ಭಾರತ ನಮಗೆ ಅತ್ಯಗತ್ಯ ಮಿತ್ರ ರಾಷ್ಟ್ರವಾಗಿದೆ. ಈ ಉದ್ದೇಶ ಕ್ವಾಡ್ ನ ಕೇಂದ್ರಬಿಂದುವಾಗಿದೆ ಎಂದು ಅಮೆರಿಕದ ವಕ್ತಾರ ನೆಡ್ ಪ್ರೈಸ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಮಾ.03 ರ ಕ್ವಾಡ್ ನಾಯಕರ ವರ್ಚ್ಯುಯಲ್ ಸಭೆಗೂ ಮುನ್ನ, ಅಮೆರಿಕದ ಕಾರ್ಯದರ್ಶಿ ಅಟಾನಿ ಬ್ಲಿಕೆನ್ ವಿದೇಶಾಂಗ ಸಚಿವ ಡಾ. ಎಸ್ ಜೈಶಂಕರ್ ಅವರನ್ನು ಭೇಟಿ ಮಾಡಿದ್ದು, ಮುಕ್ತ ಹಾಗೂ ಸ್ವಾತಂತ್ರ್ಯ ಇಂಡೋ-ಪೆಸಿಫಿಕ್ ನಲ್ಲಿ ಎಲ್ಲಾ ದೇಶಗಳ ಪ್ರಾದೇಶಿಕ ಸಮಗ್ರತೆ ಹಾಗೂ ಸಾರ್ವಭೌಮತ್ವವನ್ನು ಗೌರವಿಸುವುದಕ್ಕೆ ತಮ್ಮ ಬದ್ಧತೆಯನ್ನು ದೃಢಪಡಿಸಿದ್ದರು ಎಂದು ಪ್ರೈಸ್ ಈ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಇನ್ನು ಇತ್ತೀಚೆಗೆ ಭಾರತಕ್ಕೆ ಭೇಟಿ ನೀಡಿದ್ದ ಅಮೆರಿಕ ರಾಜಕೀಯ ವ್ಯವಹಾರಗಳ ಸಚಿವ ವಿಕ್ಟೋರಿಯಾ ನುಲ್ಯಾಂಡ್ ಭಾರತ ರಷ್ಯಾದೊಂದಿಗೆ ಐತಿಹಾಸಿಕ ರಕ್ಷಣೆ ಹಾಗೂ ಭದ್ರತಾ ಸಂಬಂಧವನ್ನು ಹೊಂದಿದೆ. ಅಮೆರಿಕ ಕೂಡ ಭಾರತಕ್ಕೆ ಬಲಿಷ್ಠ ರಕ್ಷಣಾ ಹಾಗೂ ಭದ್ರತಾ ಪಾಲುದಾರ ರಾಷ್ಟ್ರವಾಗಬಹುದು ಎಂದು ಹೇಳಿದ್ದರು.
ನಮ್ಮ ಇಚ್ಛೆ ಹಾಗೂ ಸಾಮರ್ಥ್ಯದ ವಿಷಯದಲ್ಲಿ ಕಾಲ ಬದಲಾಗಿದ್ದು ಭಾರತಕ್ಕೆ ಅಮೆರಿಕ ಬಲಿಷ್ಠ ರಕ್ಷಣಾ ಹಾಗೂ ಭದ್ರತಾ ಪಾಲುದಾರ ರಾಷ್ಟ್ರವಾಗಬಹುದು" ಎಂದು ಹೇಳಿದ್ದಾರೆ.