ನವದೆಹಲಿ:ಯುದ್ಧ ಪೀಡಿತ ಉಕ್ರೇನ್‌ನ ವಿವಿಧ ಗಡಿ ಕೇಂದ್ರದ ಮೂಲಕ ಸ್ವದೇಶಕ್ಕೆ ಪರಾರಿಯಾಗಲು ಸಾವಿರಾರು ಭಾರತೀಯ ವಿದ್ಯಾರ್ಥಿಗಳು ಪ್ರಯತ್ನಿಸುತ್ತಿದ್ದಾರೆ. ಉಕ್ರೇನ್‌ನ ಅಧಿಕಾರಿಗಳು ಕೆಲವು ವಿದ್ಯಾರ್ಥಿಗಳನ್ನು ನಿರ್ಬಂಧಿಸುವ, ಕಿರುಕುಳ ನೀಡುವ ಹಾಗೂ ಥಳಿಸುವ ಹಲವು ವೀಡಿಯೊಗಳು ಸಾಮಾಜಿಕ ಜಾಲ ತಾಣದಲ್ಲಿ ವೈರ್ ಆಗಿವೆ.
ಭಾರತೀಯರು ಕಿರುಕುಳ ಎದುರಿಸುತ್ತಿರುವ ಬಗೆಗಿನ ಹೆಚ್ಚಿನ ಘಟನೆಗಳು ಜನದಟ್ಟಣೆ ಹೆಚ್ಚಾಗಿರುವ ಉಕ್ರೇನ್-ಪೋಲೆಂಡ್‌ನಿಂದ ವರದಿಯಾಗಿದೆ. ಒಂದು ವೀಡಿಯೊದಲ್ಲಿ ಸಮವಸ್ತ್ರ ಧರಿಸಿದ ಭದ್ರತಾ ಸಿಬ್ಬಂದಿಯೋರ್ವ ವಿದ್ಯಾರ್ಥಿಗೆ ಪದೇ ಪದೇ ಒದೆಯುವ ದೃಶ್ಯ ಕಂಡು ಬಂದಿದೆ. ಇನ್ನೊಂದು ವೀಡಿಯೊದಲ್ಲಿ ಉಕ್ರೇನ್‌ನ ಯೋಧರು ಗಾಳಿಯಲ್ಲಿ ಗುಂಡು ಹಾರಿಸುತ್ತಿರುವುದು ಹಾಗೂ ಉಕ್ರೇನ್‌ಗೆ ಹಿಂದಿರುಗುವಂತೆ ವಿದ್ಯಾರ್ಥಿಗಳನ್ನು ಬಲವಂತಪಡಿಸುತ್ತಿರುವುದು ಕಂಡು ಬಂದಿದೆ. ತಾನು ಹಾಗೂ ತನ್ನ ಗೆಳೆಯನನ್ನು ಉಕ್ರೇನ್‌ನ ಪೊಲೀಸ್ ಸಿಬ್ಬಂದಿ ದೂಡಿದರು ಹಾಗೂ ಲಾಠಿಯಿಂದ ಥಳಿಸಿದರು ಎಂದು ವಿದ್ಯಾರ್ಥಿನಿಯೋರ್ವರು ಹೇಳುತ್ತಿರುವುದು ಅಡಿಯೊದಲ್ಲಿ ಕೇಳಿ ಬಂದಿದೆ. ಪೊಲೀಸ್ ಸಿಬ್ಬಂದಿ ತಮ್ಮ ವಾಹನಗಳನ್ನು ವಿದ್ಯಾರ್ಥಿಗಳ ಗುಂಪಿನ ಮೇಲೆ ನುಗ್ಗಿಸಲು ಪ್ರಯತ್ನಿಸಿದ್ದಾರೆ ಎಂದು ಅವರು ಹೇಳಿದ್ದಾರೆ.
ಭಾರತ ಸರಕಾರ ರಷ್ಯಾವನ್ನು ಬೆಂಬಲಿಸುತ್ತಿರುವುದರಿಂದ ಗಡಿ ದಾಟಲು ಬಿಡುವುದಿಲ್ಲ ಎಂದು ಉಕ್ರೇನ್ ಅಧಿಕಾರಿಗಳು ಹೇಳಿದ್ದಾರೆ ಎಂದು ಮತ್ತೋರ್ವ ಭಾರತೀಯ ವಿದ್ಯಾರ್ಥಿ ತಿಳಿಸಿದ್ದಾನೆ. ಕೊರೆಯುವ ಚಳಿಯ ಪರಿಸ್ಥಿತಿಯಲ್ಲಿ ಗೃಹಬಂಧನದ ಸ್ಥಿತಿಯಲ್ಲಿ ತಮ್ಮನ್ನು ಇರಿಸಲಾಗಿದೆ. ಅಲ್ಲದೆ ಆಹಾರ, ನೀರು ನಿರಾಕರಿಸಲಾಗಿದೆ ಎಂದು ಕೆಲವು ವಿದ್ಯಾರ್ಥಿಗಳು ದೂರಿದ್ದಾರೆ. ಚೆರ್ನಿವ್‌ಟ್ಸಿ ರಾಷ್ಟ್ರೀಯ ವಿಶ್ವವಿದ್ಯಾನಿಲಯದ 21 ಭಾರತೀಯ ವಿದ್ಯಾರ್ಥಿಗಳ ಇನ್ನೊಂದು ಗುಂಪು ಚೆರ್ನಿವ್‌ಟ್ಸಿಯಲ್ಲಿ ಸಿಲುಕಿಕೊಂಡಿದೆ.ಉಕ್ರೇನ್‌ನ ಪೊಲೀಸರು ವಿದ್ಯಾರ್ಥಿನಿಯರಿಗೆ ಕಿರುಕುಳ ನೀಡಿದ್ದಾರೆ ಹಾಗೂ ಥಳಿಸಿದ್ದಾರೆ ಎಂದು ಕೆಲವರು ಆರೋಪಿಸಿದ್ದಾರೆ. ವಿದ್ಯಾರ್ಥಿಗಳು ರಸ್ತೆಯಲ್ಲಿ ಸಿಲುಕಿಕೊಂಡಿದ್ದಾರೆ. ಅವರಲ್ಲಿ ಹಣ ಹಾಗೂ ಆಹಾರ ಖಾಲಿ ಆಗಿದೆ ಎಂದು ವಿದ್ಯಾರ್ಥಿನಿ ಪ್ರಿಯಾ ಹೇಳಿದ್ದಾರೆ. ''ಕಳೆದ ನಾಲ್ಕು ದಿನಗಳಿಂದ ನಾವು ಕೇವಲ ಮೂರರಿಂದ ನಾಲ್ಕು ಸ್ಪೂನ್ ಊಟ ಮಾಡುತ್ತಿದ್ದೇವೆ. ಪಟ್ಟಣದಿಂದ ಹೊರಗೆ ಬರಲು ರೈಲು ಹತ್ತಿ ಎಂದು ರಾಯಭಾರಿ ಕಚೇರಿ ನಮ್ಮಲ್ಲಿ ವಿನಂತಿಸಿದೆ. ನಾವು ಹೇಗೋ ಚೆರ್ನಿವ್‌ಟ್ಸಿಗೆ ತಲುಪಿದ್ದೇವೆ. ಇದುವರೆಗೆ ಸುಮಾರು 2.5 ಲಕ್ಷ ರೂಪಾಯಿ ವೆಚ್ಚ ಮಾಡಿದ್ದೇವೆ. ಯಾವುದೇ ರೈಲು ಸಿಕ್ಕಿಲ್ಲ. ನಾವು ಭರವಸೆ ಕಳೆದುಕೊಳ್ಳುತ್ತಿದ್ದೇವೆ'' ಎಂದು ಅವರು ಹೇಳಿದ್ದಾರೆ. ''ಭಾರತೀಯ ರಾಯಭಾರಿ ಕಚೇರಿಯ ಅಧಿಕಾರಿಗಳು ನಮಗೆ ಆಹಾರ ಹಾಗೂ ವಸತಿಯ ನೆರವು ನೀಡುತ್ತಿದ್ದಾರೆ. ಗಡಿಯಲ್ಲಿರುವ ಭದ್ರತಾ ಸಿಬ್ಬಂದಿ ಗಡಿ ದಾಟಲು ಬಿಡುತ್ತಿಲ್ಲ. ಯಾರಾದರೂ ಗಡಿ ದಾಟಲು ಪ್ರಯತ್ನಿಸಿದರೆ, ಅವರು ರಾಡ್‌ನಿಂದ ಥಳಿಸುತ್ತಿದ್ದಾರೆ'' ಎಂದು ಭಾರತ ವಿದ್ಯಾರ್ಥಿ ಮನ್ಸಿ ಚೌಧರಿ ಹೇಳಿದ್ದಾರೆ.