ಪಣಜಿ: ಗೋವಿನ ವಿಧಾನಸಭಾ ಚುನಾವಣಾ ಫಲಿತಾಂಶ ಪ್ರಕಟಣೆ ಚಾಲ್ತಿಯಲ್ಲಿದ್ದು, ಅತ್ತ ಗೋವಾ ಕಾಂಗ್ರೆಸ್ ನಾಯಕರ ದಂಡು ಮತಎಣಿಕೆಗೂ ಮುನ್ನವೇ ಚುನಾವಣೆ ಗೆಲ್ಲುವ ಅತಿಯಾದ ಆತ್ಮ ವಿಶ್ವಾಸದಿಂದ ರಾಜ್ಯಪಾಲರ ಬಳಿ ಭೇಟಿಗೆ ಸಮಯ ಕೇಳಿ ಇದೀಗ ವ್ಯಾಪಕ ಮುಜುಗರಕ್ಕೀಡಾಗಿದೆ.
ಹೌದು.. ಮತಎಣಿಕೆಗೂ ಮುನ್ನವೇ ಗೆದ್ದೆ ಗೆಲ್ಲುತ್ತೇವೆಂಬ ಅತಿಯಾದ ಆತ್ಮ ವಿಶ್ವಾಸ ಹೊಂದಿದ್ದಾರೆ ಗೋವಾ ಕಾಂಗ್ರೆಸ್ ಪಕ್ಷಕ್ಕೆ ಇದೀಗ ಭಾರೀ ನಿರಾಸೆಯಾಗಿದ್ದು, ಗೆಲ್ಲುವ ವಿಶ್ವಾಸದಲ್ಲೇ ಮಧ್ಯಾಹ್ನದ ನಂತರ ರಾಜ್ಯಪಾಲರ ಭೇಟಿಗೆ ಕಾಂಗ್ರೆಸ್ ಸಮಯ ಕೇಳಿತ್ತು. ಆದರೀಗ ಕಾಂಗ್ರೆಸ್ ಲೆಕ್ಕಾಚಾರಗಳೆಲ್ಲ ಉಲ್ಟಾ ಹೊಡೆದಿದ್ದು, ಗೋವಾದಲ್ಲಿ 19 ಸ್ಥಾನಗಳಲ್ಲಿ ಮುನ್ನಡೆ ಪಡೆದಿರುವ ಬಿಜೆಪಿ ಮೈತ್ರಿಕೂಟ ಸರ್ಕಾರ ರಚನೆ ಮಾಡುವ ವಿಶ್ವಾಸದಲ್ಲಿದೆ.
ಕಾಂಗ್ರೆಸ್ ಮೂಲಗಳು ಹೇಳುವ ಪ್ರಕಾರ ರಾಜ್ಯಪಾಲ ಪಿ.ಎಸ್. ಶ್ರೀಧರನ್ ಪಿಳ್ಳೈ ಅವರ ಭೇಟಿಗೆ ಮಧ್ಯಾಹ್ನ ಮೂರು ಗಂಟೆಗೆ ಕಾಂಗ್ರೆಸ್ ಸಮಯ ಕೇಳಿತ್ತು. ಆದರೆ ಹಾಲಿ ಟ್ರೆಂಡ್ ನಲ್ಲಿ ಬಿಜೆಪಿ ಮೈತ್ರಿಕೂಟ ಮುನ್ನಡೆಯಲ್ಲಿರುವುದರಿಂದ ರಾಜಭವನ ಈವರೆಗೂ ಯಾವುದೇ ಸಮಯ ನೀಡಿಲ್ಲ ಎಂದು ತಿಳಿದುಬಂದಿದೆ. ನಾವು ಬಹುಮತದ ವಿಶ್ವಾಸ ಹೊಂದಿದ್ದೇವೆ ಮತ್ತು 2017 ರ ಚುನಾವಣೆಯಲ್ಲಿ ಮಾಡಿದ ತಪ್ಪುಗಳಿಂದ ಪಾಠ ಕಲಿಯಲು ಪಕ್ಷವು ಮುಂಚಿತವಾಗಿ ರಾಜ್ಯಪಾಲರ ಸಮಯ ಕೇಳಿದೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿತ್ತು.
2017ರಲ್ಲಿ ಕಾಂಗ್ರೆಸ್ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಆದರೆ ಮೈತ್ರಿ ಮಾಡಿಕೊಳ್ಳಲು ವಿಳಂಬವಾದ ಕಾರಣ ಸರ್ಕಾರ ರಚಿಸುವಲ್ಲಿ ವಿಫಲವಾಯಿತು. ಬಿಜೆಪಿ ಕಡಿಮೆ ಸ್ಥಾನಗಳಲ್ಲಿ ಜಯ ಸಾಧಿಸಿದರೂ ಸಣ್ಣ ಪಕ್ಷ ಎಂಜಿಪಿ ಪಕ್ಷ ಮತ್ತು ಪಕ್ಷೇತರ ಅಭ್ಯರ್ಥಿಗಳ ನೆರವಿನಿಂದ ಅಧಿಕಾರದ ಚುಕ್ಕಾಣಿ ಹಿಡಿದಿತ್ತು.
ಆದರೆ, ಈ ಬಾರಿ ಆ ತಪ್ಪುಗಳು ಮತ್ತೆ ಮರುಕಳಿಸಬಾರದೆಂಬ ಉದ್ದೇಶದಿಂದ ಈ ಬಾರಿ, ಹೆಚ್ಚು ಕ್ರಿಯಾಶೀಲವಾಗಿದ್ದ ಕಾಂಗ್ರೆಸ್ ಪಕ್ಷದ ಪಿ ಚಿದಂಬರಂ ಮತ್ತು ಡಿಕೆ ಶಿವಕುಮಾರ್ ಅವರನ್ನು ಗೋವಾ ರಾಜ್ಯಕ್ಕೆ ಕಳುಹಿಸಿತ್ತು. ಅಲ್ಲದೆ ಇಂದು ರಾಜ್ಯಪಾಲರ ಭೇಟಿಗೆ ಸಮಯ ಕೂಡ ಕೇಳಿತ್ತು. ಆದರೆ ತಮಗೆ ಸರಳ ಬಹುಮತ ಸಿಗಲಿದೆ ಎಂಬ ಭರವಸೆ ಹೊಂದಿದ್ದ ಕಾಂಗ್ರೆಸ್ಗೆ ಇದೀಗ ಭಾರೀ ಮುಖಭಂಗವಾಗಿದೆ.
ಒಟ್ಟು 40 ವಿಧಾನಸಭಾ ಸ್ಥಾನಗಳನ್ನು ಹೊಂದಿರುವ ಗೋವಾದಲ್ಲಿ ಗದ್ದುಗೆ ಏರಲು ಮ್ಯಾಜಿಕ್ ನಂಬರ್ 21 ಸ್ಥಾನಗಳು ಬೇಕಿದೆ. ಸದ್ಯ ಬಿಜೆಪಿ ಮ್ಯಾಜಿಕ್ ನಂಬರ್ ನತ್ತ ದಾಪುಗಾಲಿರಿಸಿದ್ದು, ಅಧಿಕಾರದ ಗದ್ದುಗೆ ಏರುವತ್ತ ಸಾಗಿದೆ.