ಕಾಸರಗೋಡು: ಕೇರಳ ಕೇಂದ್ರೀಯ ವಿಶ್ವ ವಿದ್ಯಾಲಯದ ಕಾಸರಗೋಡು ಪೆರಿಯ ಕ್ಯಾಂಪಸ್‍ನ ಸ್ಥಾಪನಾ ದಿನವನ್ನು ಆಚರಿಸಲಾಯಿತು. ವಿಶ್ವ ವಿದ್ಯಾಲಯದ ಸಬರ್ಮತಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮವನ್ನು ಉಪಕುಲಪತಿ ಪ್ರೊ. ವೆಂಕಟೇಶ್ವರಲು ಉದ್ಘಾಟಿಸಿದರು. ರಾಷ್ಟ್ರೀಯ ಶಿಕ್ಷಣ ನೀತಿ ಸಮಿತಿ ಸದಸ್ಯ ಡಾ. ಎಂ.ಕೆ. ಶ್ರೀಧರ್ ಸ್ಥಾಪಕದಿನ ಭಾಷಣ ಮಾಡಿದರು. ಈ ಸಂದರ್ಭ ಮಾತನಾಡಿದ ಅವರು ವಿದ್ಯಾಭ್ಯಾಸ ವಲಯದಲ್ಲಿ ಸಂಪನ್ಮೂಲ ಲಭ್ಯತೆ ಖಚಿತಪಡಿಸುವ ನಿಟ್ಟಿನಲ್ಲಿ ಈ ಹಿಂದೆ ಆದ್ಯತೆ ನೀಡುತ್ತಾ ಬರಲಾಗಿದೆ. ಜತೆಗೆ ಪಠ್ಯ ಪದ್ಧತಿ, ಪಾಠ ಪುಸ್ತಕ, ತರಗತಿ ಕೊಠಡಿಗಳು, ಮೂಲಸೌಕರ್ಯಗಳಿಗೂ ಹೆಚ್ಚಿನ ಪ್ರಾಧಾನ್ಯತೆ ನೀಡಲಾಗಿದೆ. ಆದರೆ ಸಂನ್ಮೂಲ ಲಭ್ಯತೆಗೆ ಅನುಗುಣವಾಗಿ ಉದ್ದೇಶಿತ ಫಲಪ್ರಾಪ್ತಿ ಖಚಿತಪಡಿಸುವಲ್ಲಿ ಎಷ್ಟು ಜಯಶಾಲಿಗಳಾಗಿದ್ದೇವೆ ಎಂಬ ಬಗ್ಗೆ ಪರಾಮರ್ಶೆ ನಡೆಸಬೇಕಾದ ಅನಿವಾರ್ಯತೆಯಿದೆ. ಶಾಲೆಯಿಂದ ತೊಡಗಿ ಉನ್ನತ ಶಿಕ್ಷಣ ವರೆಗೆ ಪನ್ಮೂಲ ಲಭ್ಯತೆಯಾಗಿದ್ದರೂ, ಅನುಪಾತಿಕ ಫಲಪ್ರಾಪ್ತಿ, ವಿದ್ಯಾರ್ಥಿಗಳಲ್ಲಿನ ಸಾಮಥ್ರ್ಯ, ನೈಪುಣ್ಯದ ಬಗ್ಗೆ ಖಚಿತಪಡಿಸುವಿಕೆ ಆಧುನಿಕ ಭಾರತೀಯ ವಿದ್ಯಾಬ್ಯಾಸದ ಅನಿವಾರ್ಯತೆಯಾಗಿದೆ ಎಂದು ತಿಳಿಸಿದರು. ಸ್ಥಾಪನಾ ದಿನಾಚರಣೆ ಅಂಗವಾಗಿ ನೋಬೆಲ್ ಪಾರಿತೋಷಕ ವಿಜೇತ ಡಾ. ಡೇವಿಡ್.ಜೆ ವೈನ್‍ಲಂಡ್ ಅವರ ಉಪನ್ಯಾಸ ನಡೆಯಿತು.
ರಿಜಿಸ್ಟ್ರಾರ್ ಡಾ. ಎನ್. ಸಂತೋಷ್ ಕುಮಾರ್, ಡೀನ್ ಅಕಾಡಮಿಕ್ ಪ್ರೊ. ಅಮೃತ್ ಜಿ. ಕುಮಾರ್ ಉಪಸ್ಥಿತರಿದ್ದರು. ಈ ಸಂದರ್ಭ ವಿದ್ಯಾರ್ಥಿಗಳಿಂದ ಕಲಾ ಕಾರ್ಯಕ್ರಮ ಜರುಗಿತು.