ಕೊಯಂಬತ್ತೂರು: ಉಕ್ರೇನಿಯನ್ ಅರೆಸೈನಿಕ ಪಡೆಗೆ ಸ್ವಯಂಸೇವಕರಾಗಿ ಸೇರಿಕೊಂಡ 21 ವರ್ಷದ ಏರೋಸ್ಪೇಸ್ ಎಂಜಿನಿಯರಿಂಗ್ ವಿದ್ಯಾರ್ಥಿ ಆರ್ ಸಾಯಿನಿಕೇಶ್ ತಮ್ಮ ಮನೆಗೆ ಮರಳಲು ಇಚ್ಛೆ ವ್ಯಕ್ತಪಡಿಸಿದ್ದಾರೆ ಎಂದು ಅವರ ಕುಟುಂಬ ಮೂಲಗಳು ತಿಳಿಸಿರುವುದಾಗಿ thenewindianexpresss ವರದಿ ಮಾಡಿದೆ.
ವಿದ್ಯಾರ್ಥಿಯಾಗಿರುವ ಸಾಯಿನಿಕೇಶ್ ಕಳೆದ ತಿಂಗಳು ಯುದ್ಧ ಪ್ರಾರಂಭವಾದ ನಂತರ ರಷ್ಯಾದ ಸೈನ್ಯದ ವಿರುದ್ಧ ಹೋರಾಡಲು ಜಾರ್ಜಿಯನ್ ನ್ಯಾಷನಲ್ ಲೀಜನ್ ಗೆ ಸೇರಿದ್ದರು.
ಜಾರ್ಜಿಯನ್ ನ್ಯಾಷನಲ್ ಲೀಜನ್ ಎಂಬುದು ಅರೆಸೈನಿಕ ಘಟಕವಾಗಿದ್ದು, ಇದನ್ನು ಉಕ್ರೇನ್‌ನ ಪರವಾಗಿ ಹೋರಾಡುತ್ತಿರುವ ಬಹುತೇಕ ಜಾರ್ಜಿಯನ್ ಸ್ವಯಂಸೇವಕರು ರಚಿಸಿದ್ದಾರೆ.
ಕೆಲವು ದಿನಗಳ ಹಿಂದೆ ಕೇಂದ್ರ ಗುಪ್ತಚರ ಅಧಿಕಾರಿಗಳು ಅವರನ್ನು ಭೇಟಿಯಾಗಿ ಸಾಯಿನಿಕೇಶ್ ನ ವಿವರಗಳನ್ನು ಸಂಗ್ರಹಿಸಿದ ನಂತರವೇ ಈ ವಿಚಾರ ಅವರ ಪೋಷಕರಿಗೆ ತಿಳಿದು ಬಂದಿತ್ತು.
ಸಾಯಿನಿಕೇಶ್ ತಂದೆ ರವಿಚಂದ್ರನ್ ಮೂರು ದಿನಗಳ ಹಿಂದೆ ತನ್ನ ಮಗನ ಜೊತೆ ಮಾತನಾಡಿದ್ದು, ಈ ವೇಳೆ ಮನೆಗೆ ಮರಳುವ ಇಚ್ಛೆಯನ್ನು ಸಾಯಿನಿಕೇಶ್ ವ್ಯಕ್ತಪಡಿಸಿದ್ದರು ಎಂದು ಮೂಲಗಳು ತಿಳಿಸಿವೆ.