ಕಾಸರಗೋಡು: ಕೇರಳದಲ್ಲಿ ಕೊಲೆಪಾತಕತನ ಹಾಗೂ ಮಹಿಳಾ ದೌರ್ಜನ್ಯ ತಡೆಯಲಾಗದ ಪಿಣರಾಯಿ ವಿಜಯನ್ ನೇತೃತ್ವದ ಎಡರಂಗ ಸರ್ಕಾರ ತನ್ನ ಬಜೆಟ್‍ನಲ್ಲಿ ವಿಶ್ವ ಶಾಂತಿಗಾಗಿ 2ಕೋಟಿ ರೂ. ಮೀಸಲಿರಿಸಿರುವುದು ಹಾಸ್ಯಾಸ್ಪದ ಎಂಬುದಾಗಿ ಬಿಜೆಪಿ ರಾಜ್ಯ ಸೆಲ್ ಕೋರ್ಡಿನೇಟರ್ ಅಶೋಕನ್ ಕುಳನಾಡ್ ತಿಳಿಸಿದ್ದಾರೆ.
ಅವರು ಬಿಜೆಪಿ ಕಾಸರಗೋಡು ಜಿಲ್ಲಾ ಸಮಿತಿ ಕಚೇರಿಯಲ್ಲಿ ಆಯೋಜಿಸಲಾಗಿದ್ದ ಪಕ್ಷದ ಜಿಲ್ಲಾ ಸಮಿತಿ ಸಮಾವೇಶ ಉದ್ಘಾಟಿಸಿ ಮಾತನಾಡಿದರು.
ಖಾಸಗಿ ವಿದ್ಯಾಭ್ಯಾಸ ಸಂಸ್ಥೆ, ಕೃಷಿ ವಲಯದ ಯಾಂತ್ರೀಕರಣ, ಕಂಪ್ಯೂಟರೀಕರಣ ವಿರೋಧಿಸುವ ಮೂಲಕ ಕೇರಳರಾಜ್ಯದ ಅಭಿವೃದ್ಧಿಗೆ ತಡೆಯೊಡ್ಡಿದ್ದ ಸಿಪಿಎಂ ಇಂದು ಅಭಿವೃದ್ಧಿಯ ಮಂತ್ರ ಪಠಿಸುತ್ತಿರುವುದಾಗಿ ತಿಳಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ರವೀಶ ತಂತ್ರಿ ಕುಂಟಾರು ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಬಜೆಟ್‍ನಲ್ಲಿ ಕಾಸರಗೋಡು ಜಿಲ್ಲೆಯನ್ನು ಅವಗಣಿಸಿದ ಸರ್ಕಾರದ ಕ್ರಮದ ವಿರುದ್ಧ ಜಿಲ್ಲಾ ಮುಖಂಡರ ಸಮಾವೇಶ ಮಂಡಿಸಿದ ಠರಾವಿನಲ್ಲಿ ಖಂಡಿಸಲಾಯಿತು. ಪಕ್ಷದ ರಾಜ್ಯ ಸಮಿತಿ ಕಾರ್ಯದರ್ಶಿ ಕೆ.ಶ್ರೀಕಾಂತ್, ವಲಯ ಸಂಘಟನಾ ಕಾರ್ಯದರ್ಶಿ ಕೆ. ಕಾಶೀನಾಥ್, ರಾಷ್ಟ್ರೀಯ ಸಮಿತಿ ಸದಸ್ಯ ಎಂ. ಸಂಜೀವ ಶೆಟ್ಟಿ ಉಪಸ್ಥಿತರಿದ್ದರು. ಎ.ವೇಲಾಯುಧನ್ ಸ್ವಾಗತಿಸಿದರು. ವಿಜಯ್ ಕುಮಾರ್ ರೈ ವಂದಿಸಿದರು.