ಇಸ್ತಾಂಬುಲ್: ಯುದ್ಧ ನಿರತ ರಷ್ಯಾ ಮತ್ತು ಯೂಕ್ರೇನ್ನ ವಿದೇಶಾಂಗ ಸಚಿವರುಗಳು ಟರ್ಕಿಯ ಇಸ್ತಾಂಬುಲ್ ನಗರದಲ್ಲಿ ನಡೆಸುತ್ತಿದ್ದ ಸಂಧಾನ ಯಾವುದೇ ಫಲ ನೀಡದೆ ಅಂತ್ಯಗೊಂಡಿದೆ. ಯೂಕ್ರೇನ್ನ ಡಿಮಿತ್ರೊ ಕುಲೇಬಾ ಮತ್ತು ರಷ್ಯಾದ ಸೆರ್ಗಿ ಲಾವ್ರೋವ್ ಗುರುವಾರ ಸಭೆ ನಡೆಸಿದ್ದರು.
ಮಾರಿಯುಪೋಲ್ನಲ್ಲಿ ಸಿಲುಕಿಕೊಂಡಿರುವ ನಾಗರಿಕರನ್ನು ತೆರವುಗೊಳಿಸಲು ಕದನವಿರಾಮ ಘೋಷಿಸುವಂತೆ ಯೂಕ್ರೇನ್ ಮುಂದಿಟ್ಟಿದ್ದ ಬೇಡಿಕೆಯನ್ನು ರಷ್ಯಾ ತಿರಸ್ಕರಿಸಿರುವುದರಿಂದ ಬಿಕ್ಕಟ್ಟು ಮುಂದುವರಿದಿದೆ.
ಫೆಬ್ರವರಿ 28ರಂದು ಯುದ್ಧ ಆರಂಭವಾದಾಗಿನಿಂದ ಉಭಯ ಮುಖಂಡರು ಇದೇ ಮೊದಲ ಬಾರಿಗೆ ಮುಖಾಮುಖಿ ಸಭೆ ನಡೆಸಿದ್ದರು. ಆದರೆ, ಸಮಸ್ಯೆಗೆ ಸಮಾಧಾನಕರ ಪರಿಹಾರ ಸಿಗಬಹುದೆಂಬ ಆಶಾವಾದ ಹೆಚ್ಚು ಕಾಲ ಮುಂದುವರಿಯಲಿಲ್ಲ. ಸಭೆ ಯಾವುದೇ ಫಲಶ್ರುತಿಯಿಲ್ಲದೆ ಮುಗಿದಿದೆ. ಕದನ ವಿರಾಮ ಹಾಗೂ ಮಾರಿಯುಪೋಲ್ನಿಂದ ಹಾಗೂ ಅಲ್ಲಿಗೆ ಮಾನವೀಯ ದೃಷ್ಟಿಯಲ್ಲಿ ಕಾರಿಡಾರ್ ಮುಕ್ತಗೊಳಿಸಬೇಕೆಂಬ ಬೇಡಿಕೆಯನ್ನು ರಷ್ಯಾ ಮನ್ನಿಸಲಿಲ್ಲ ಎಂದು ಯೂಕ್ರೇನ್ ವಿದೇಶಾಂಗ ಮಂತ್ರಿ ಕುಲೇಬಾ ಹೇಳಿದ್ದಾರೆ. ಸಮರ ಅಂತ್ಯಕ್ಕೆ ಪರಿಹಾರ ಕಂಡುಕೊಳ್ಳಲು ಮತ್ತೆ ಸಭೆ ಸೇರಲು ಉಭಯ ದೇಶಗಳು ಒಪ್ಪಿವೆ.
ನಿರ್ವಾತ ಬಾಂಬ್ ಬಳಕೆ ಒಪ್ಪಿಕೊಂಡ ರಷ್ಯಾ: ಯೂಕ್ರೇನ್ ಯುದ್ಧದಲ್ಲಿ ತಾನು ನಿರ್ವಾತ ಬಾಂಬ್ (ವ್ಯಾಕ್ಯೂಮ್ ಬಾಂಬ್) ಬಳಸಿರುವುದನ್ನು ರಷ್ಯಾ ದೃಢಪಡಿಸಿದೆ ಎಂದು ಬ್ರಿಟನ್ನ ರಕ್ಷಣಾ ಸಚಿವಾಲಯ ತಿಳಿಸಿದೆ. ಟಿಒಎಸ್-1ಎ ಶಸ್ತ್ರ ವ್ಯವಸ್ಥೆಯನ್ನು ಬಳಸಿದ್ದನ್ನು ರಷ್ಯಾದ ರಕ್ಷಣಾ ಸಚಿವಾಲಯ ಒಪ್ಪಿಕೊಂಡಿದೆ ಎಂದು ಬ್ರಿಟನ್ ಹೇಳಿದೆ. ಸ್ಪೋಟಗೊಂಡ ಸುತ್ತಮುತ್ತಲಿನ ಪ್ರದೇಶದ ಆಮ್ಲಜನಕವನ್ನು ಸಂಪೂರ್ಣವಾಗಿ ಹೀರಿಕೊಳ್ಳುವ ಅಸ್ತ್ರವನ್ನು ವ್ಯಾಕ್ಯೂಮ್ ಬಾಂಬ್ ಎನ್ನುತ್ತಾರೆ. ಇದರಿಂದ ಮನುಷ್ಯರ ಉಸಿರಾಟ ವ್ಯವಸ್ಥೆ ಹಾನಿಗೊಂಡು ಜೀವಕ್ಕೇ ಎರವಾಗುತ್ತದೆ.
ರೋಗಕಾರಕ ನಾಶಕ್ಕೆ ಡಬ್ಲ್ಯುಎಚ್ಒ ಕರೆ: ಯೂಕ್ರೇನ್ನ ಆರೋಗ್ಯ ಪ್ರಯೋಗಾಲಯಗಳ ಮೇಲೆ ಬಾಂಬ್ ದಾಳಿ ನಡೆದರೆ ಅವುಗಳಲ್ಲಿ ಇರಬಹುದಾದ ಅತಿ ಅಪಾಯಕಾರಿ ರೋಗಕಾರಕ ವೈರಸ್, ಬ್ಯಾಕ್ಟೀರಿಯಾ ಮುಂತಾದ ರೋಗಕಾರಕಗಳನ್ನು (ಪ್ಯಾಥೋಜನ್) ನಾಶಪಡಿಸುವಂತೆ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್ಒ) ಯೂಕ್ರೇನ್ಗೆ ಸಲಹೆ ಮಾಡಿದೆ. ನಗರಗಳ ಮೇಲೆ ಬಾಂಬ್ ದಾಳಿ ನಡೆದಲ್ಲಿ ಲ್ಯಾಬ್ಗಳಲ್ಲಿರುವ ರೋಗಕಾರಕಗಳು ಸೋರಿಕೆಯಾಗುವ ಅಪಾಯವಿರುತ್ತದೆ ಎಂದು ಜೈವಿಕ ಭದ್ರತಾ ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ. ಪ್ಯಾಥೋಜನ್ಗಳು ಸೋರಿಕೆಯಾದರೆ ವ್ಯಾಧಿಗಳು ಹುಟ್ಟಿ ಜನರಿಗೆ ಹರಡುತ್ತವೆ. ಬಹಳ ದೇಶಗಳಲ್ಲಿ ಇರುವಂತೆ ಯೂಕ್ರೇನ್ನಲ್ಲಿ ಕೂಡ ಸಾರ್ವಜನಿಕ ಆರೋಗ್ಯ ಪ್ರಯೋಗಾಲಯಗಳಿವೆ. ಇತ್ತೀಚಿನ ಕೋವಿಡ್-19ರಂಥ, ಮಾನವರು ಮತ್ತು ಪ್ರಾಣಿಗಳನ್ನು ಕಾಡುವ ರೋಗಗಳ ಬಗ್ಗೆ ಅವು ಸಂಶೋಧನೆ ನಡೆಸುತ್ತವೆ.
ಸುಮಿಯಿಂದ ಬಂದ ವಿದ್ಯಾರ್ಥಿಗಳು: ಯೂಕ್ರೇನ್ನ ಸುಮಿಯಿಂದ ತೆರವು ಮಾಡಲಾಗಿದ್ದ ಭಾರತೀಯ ವಿದ್ಯಾರ್ಥಿಗಳನ್ನು ಹೊತ್ತ ಭಾರತೀಯ ವಾಯು ಪಡೆಯ (ಐಎಎಫ್) ವಿಮಾನ ಶುಕ್ರವಾರ ಮಧ್ಯಾಹ್ನ ದೆಹಲಿ ವಾಯು ನೆಲೆಗೆ ಬಂದಿಳಿಯಿತು.
ಸ್ವಯಂಸೇವಕರಿಗೆ ಪುತಿನ್ ಆಹ್ವಾನ: ಯೂಕ್ರೇನ್ ವಿರುದ್ಧ ಹೋರಾಡಲು ಮಧ್ಯಪ್ರಾಚ್ಯದ ಸುಮಾರು 16,000 ಸ್ವಯಂ ಸೇವಕರು ಸಿದ್ಧವಾಗಿದ್ದಾರೆ ಎಂದು ರಷ್ಯಾದ ಭದ್ರತಾ ಮಂಡಳಿ ಸಭೆಯಲ್ಲಿ ರಕ್ಷಣಾ ಸಚಿವ ಸೆರ್ಗಿ ಶೋಯ್ಗು ಹೇಳಿದ್ದಾರೆ. ಸ್ವಯಂಸೇವಕರನ್ನು ಆಹ್ವಾನಿಸಲು ಅಧ್ಯಕ್ಷ ವ್ಲಾದಿಮಿರ್ ಪತಿನ್ ಶುಕ್ರವಾರ ಹಸಿರು ನಿಶಾನೆ ತೋರಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಪೂರ್ವ ಯೂಕ್ರೇನ್ನಿಂದ ಸಿಡಿದು ಹೋದ ಡೋನ್ಬಾಸ್ ವಲಯದಲ್ಲಿ ರಷ್ಯಾ ಬೆಂಬಲಿತ ಪಡೆಗಳೊಂದಿಗೆ ಸೇರಿಕೊಂಡು ಯೂಕ್ರೇನ್ ವಿರುದ್ಧ ಸೆಣಸಲು ಸ್ವಯಂಸೇವಕರು ಸಿದ್ಧವಾಗಿದ್ದಾರೆ ಎಂದು ಸಭೆಯಲ್ಲಿ ರಕ್ಷಣಾ ಮಂತ್ರಿ ಹೇಳಿದ್ದಾರೆ.
ರಾಸಾಯನಿಕ ಅಸ್ತ್ರಗಳಿಲ್ಲ ಎಂದ ಯೂಕ್ರೇನ್: ರಾಸಾಯನಿಕ ಅಸ್ತ್ರ ಅಥವಾ ಸಾಮೂಹಿಕ ವಿನಾಶದ ಇತರ ಯಾವುದೇ ಅಸ್ತ್ರಗಳನ್ನು ಅಭಿವೃದ್ಧಿ ಪಡಿಸಿಲ್ಲ ಎಂದು ಯೂಕ್ರೇನ್ ಸ್ಪಷ್ಟಪಡಿಸಿದೆ. ಆದರೆ, ಒಂದು ವೇಳೆ ರಷ್ಯಾ ಜೈವಿಕ ಅಸ್ತ್ರಗಳನ್ನು ಬಳಸಿದರೆ ರಷ್ಯಾದ ಮೇಲೆ 'ತೀಕ್ಷ್ಣ ಸ್ವರೂಪದ ನಿರ್ಬಂಧಗಳು' ಹೇರಿಕೆಯಾಗಬಹುದು ಎಂದು ಯೂಕ್ರೇನ್ ಅಧ್ಯಕ್ಷ ವೊಲೊದಿಮಿರ್ ಝೆಲೆನ್ಸ್ಕಿ ಎಚ್ಚರಿಸಿದ್ದಾರೆ. ಯೂಕ್ರೇನ್ ಜೈವಿಕ ಅಸ್ತ್ರಗಳ ಅಭಿವೃದ್ಧಿಗೆ ಸಂಶೋಧನೆ ನಡೆಸುತ್ತಿದೆ ಎಂದು ರಷ್ಯಾ ಆರೋಪಿಸಿರುವುದರಿಂದ ಝೆಲೆನ್ಸ್ಕಿ ಈ ಸ್ಪಷ್ಟನೆ ನೀಡಿದ್ದಾರೆ. 'ನಾನು ಸಾಕಷ್ಟು ಜನಸಂಖ್ಯೆಯಿರುವ ದೇಶದ ಅಧ್ಯಕ್ಷನಾಗಿದ್ದೇನೆ. ಇಬ್ಬರು ಮಕ್ಕಳ ತಂದೆಯೂ ಆಗಿರುವೆ' ಎಂದಿರುವ ಝೆಲೆನ್ಸ್ಕಿ, ತಮ್ಮ ನೆಲದಲ್ಲಿ ಯಾವುದೇ ಬಗೆಯ ರಾಸಾಯನಿಕ ಅಸ್ತ್ರಗಳನ್ನು ಅಭಿವೃದ್ಧಿಪಡಿಸಿಲ್ಲ ಎಂದಿದ್ದಾರೆ.