ಸಂವಿಧಾನ(Constitution) ಮತ್ತು ಧಾರ್ಮಿಕ ಸ್ವಾತಂತ್ರ್ಯದ ಹೆಸರಿನಲ್ಲಿ ದೇಶದಲ್ಲಿ ಧಾರ್ಮಿಕ ಮತಾಂಧತೆ ಬೆಳೆಯುತ್ತಿದ್ದು, ಆಡಳಿತ ಯಂತ್ರವನ್ನು ಪ್ರವೇಶಿಸಲು ನಿರ್ದಿಷ್ಟ ಸಮುದಾಯವು ವಿಸ್ತಾರವಾದ ಯೋಜನೆಗಳನ್ನು ಹೊಂದಿದೆ ಎಂದು ಆರೆಸ್ಸೆಸ್(RSS) ತನ್ನ 2022 ರ ವಾರ್ಷಿಕ ವರದಿಯಲ್ಲಿ ಹೇಳಿದೆ ಎಂದು Indianexpress.com ವರದಿ ಮಾಡಿದೆ.
ಶನಿವಾರ ಬಿಡುಗಡೆ ಮಾಡಿದ ವರದಿಯಲ್ಲಿ ಈ ಬೆದರಿಕೆಯನ್ನು ಸೋಲಿಸಲು ʼಸಂಘಟಿತ ಶಕ್ತಿಯೊಂದಿಗೆ ಸರ್ವಾಂಗೀಣ ಪ್ರಯತ್ನಗಳಿಗೆʼ ಆರೆಸ್ಸೆಸ್ ಕರೆ ನೀಡಿದೆ.
"ದೇಶದಲ್ಲಿ ಬೆಳೆಯುತ್ತಿರುವ ಧಾರ್ಮಿಕ ಮತಾಂಧತೆಯ ಅಸಾಧಾರಣ ರೂಪವು ಹಲವೆಡೆ ಮತ್ತೆ ತಲೆ ಎತ್ತಿದೆ. ಕೇರಳ, ಕರ್ನಾಟಕದಲ್ಲಿ ಹಿಂದೂ ಸಂಘಟನೆಗಳ ಕಾರ್ಯಕರ್ತರ ಕ್ರೂರ ಹತ್ಯೆಗಳು ಈ ಬೆದರಿಕೆಗೆ ಉದಾಹರಣೆಯಾಗಿದೆ. ಕೋಮು ಉನ್ಮಾದ, ರ್ಯಾಲಿಗಳು, ಪ್ರತಿಭಟನೆಗಳು, ಸಂವಿಧಾನ ಮತ್ತು ಧಾರ್ಮಿಕ ಸ್ವಾತಂತ್ರ್ಯದ ನೆಪದಲ್ಲಿ ಸಾಮಾಜಿಕ ಶಿಸ್ತು, ಸಂಪ್ರದಾಯಗಳ ಉಲ್ಲಂಘನೆ, ಕ್ಷುಲ್ಲಕ ಕಾರಣಗಳನ್ನು ಪ್ರಚೋದಿಸುವ ಮೂಲಕ ಹಿಂಸಾಚಾರಕ್ಕೆ ಪ್ರಚೋದನೆ, ಕಾನೂನುಬಾಹಿರ ಚಟುವಟಿಕೆಗಳನ್ನು ಉತ್ತೇಜಿಸುವುದು ಇತ್ಯಾದಿಗಳನ್ನು ಬಹಿರಂಗಪಡಿಸುವ ಕ್ರೂರ ಕೃತ್ಯಗಳ ಸರಣಿ ಹೆಚ್ಚುತ್ತಿದೆ," ಎಂದು ವಾರ್ಷಿಕ ವರದಿ ಹೇಳಿದೆ.
ಸರ್ಕಾರಿ ಯಂತ್ರವನ್ನು ಪ್ರವೇಶಿಸಲು ನಿರ್ದಿಷ್ಟ ಸಮುದಾಯದಿಂದ ವಿಸ್ತಾರವಾದ ಯೋಜನೆಗಳು ಕಂಡುಬರುತ್ತವೆ. ಇದೆಲ್ಲದರ ಹಿಂದೆ ದೀರ್ಘಾವಧಿ ಗುರಿಯೊಂದಿಗೆ ಆಳವಾದ ಷಡ್ಯಂತ್ರ ಕೆಲಸ ಮಾಡುತ್ತಿರುವಂತೆ ಕಾಣುತ್ತಿದೆ. ಸಂಖ್ಯೆಗಳ ಆಧಾರದ ಮೇಲೆ, ಅವರ ವಾದವನ್ನು ಮನವರಿಕೆ ಮಾಡಲು ಯಾವುದೇ ಮಾರ್ಗವನ್ನು ಅಳವಡಿಸಿಕೊಳ್ಳಲು ಸಿದ್ಧತೆಗಳನ್ನು ಮಾಡಲಾಗುತ್ತಿದೆ ಎಂದು ಆರ್‌ಎಸ್‌ಎಸ್ ವರದಿಯಲ್ಲಿ ಹೇಳಿದೆ.
ಶಾಲಾ-ಕಾಲೇಜುಗಳಲ್ಲಿ ಹಿಜಾಬ್ ಧರಿಸುವುದನ್ನು ನಿಷೇಧಿಸುವುದರ ವಿರುದ್ಧ ಮುಸ್ಲಿಂ ವಿದ್ಯಾರ್ಥಿನಿಯರ ವ್ಯಾಪಕ ಪ್ರತಿಭಟನೆ ನಡೆಯುತ್ತಿರುವ ಸಂದರ್ಭದಲ್ಲೇ ಆರೆಸ್ಸೆಸ್ ನ ಈ ಹೇಳಿಕೆಗಳು ಬಂದಿವೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಉಲ್ಲೇಖಿಸಿದೆ.