ನವದೆಹಲಿ: ಸರ್ಕಾರದ ನೀತಿಗಳನ್ನು ವಿರೋಧಿಸಿ ಬ್ಯಾಂಕ್ ಸಿಬ್ಬಂದಿ ಸೇರಿದಂತೆ ವಿವಿಧ ವ್ಯಾಪಾರ ಒಕ್ಕೂಟಗಳು ಕರೆ ನೀಡಿರುವ 48 ಗಂಟೆಗಳ ಭಾರತ್ ಬಂದ್ ಅಥವಾ ರಾಷ್ಟ್ರವ್ಯಾಪಿ ಮುಷ್ಕರ ದೇಶದೆಲ್ಲೆಡೆ ಸೋಮವಾರ ಆರಂಭವಾಗಿದ್ದು, ಕೆಲವು ಪ್ರದೇಶಗಳಲ್ಲಿ ಸಹಜ ಜೀವನದ ಮೇಲೆ ಪರಿಣಾಮ ಬೀರಿದೆ.
ಉದ್ಯೋಗಿಗಳ ಒಂದು ವಿಭಾಗವು ಕರ್ತವ್ಯಕ್ಕೆ ಹಾಜರಾಗದ ಕಾರಣ ಬ್ಯಾಂಕಿಂಗ್ ಸೇವೆಗಳ ಮೇಲೆ ಭಾಗಶಃ ಪರಿಣಾಮ ಬೀರಿವೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ. ಅನೇಕ ಸಾರ್ವಜನಿಕ ವಲಯದ ಬ್ಯಾಂಕ್‌ಗಳಲ್ಲಿನ ವಹಿವಾಟುಗಳ ಮೇಲೆ ಮುಷ್ಕರದ ಪರಿಣಾಮ ಬೀರಿದೆ ಮತ್ತು ಚೆಕ್ ಕ್ಲಿಯರೆನ್ಸ್‌ನಲ್ಲಿ ವಿಳಂಬವಾಗಿದೆ. ಆದಾಗ್ಯೂ, ಹೆಚ್ಚಿನ ಖಾಸಗಿ ವಲಯದ ಬ್ಯಾಂಕ್‌ಗಳ ಕಾರ್ಯನಿರ್ವಹಣೆಯ ಮೇಲೆ ಮುಷ್ಕರದಿಂದ ಯಾವುದೇ ಪರಿಣಾಮ ಬೀರಿಲ್ಲ.
ಮುಷ್ಕರದ ಪರಿಣಾಮವು ಪೂರ್ವ ಭಾರತದಲ್ಲಿ ಹೆಚ್ಚಾಗಿದೆ. ಏಕೆಂದರೆ ಅಲ್ಲಿನ ಸಾರ್ವಜನಿಕ ವಲಯದ ಬ್ಯಾಂಕುಗಳ ಅನೇಕ ಶಾಖೆಗಳು ಮುಚ್ಚಲ್ಪಟ್ಟಿವೆ ಎಂದು ಅಖಿಲ ಭಾರತ ಬ್ಯಾಂಕ್ ಉದ್ಯೋಗಿಗಳ ಸಂಘದ (ಎಐಬಿಇಎ) ಪ್ರಧಾನ ಕಾರ್ಯದರ್ಶಿ ಸಿಎಚ್ ವೆಂಕಟಾಚಲಂ ಹೇಳಿದ್ದಾರೆ. ಇತರ ಪ್ರದೇಶಗಳಲ್ಲಿ, ಅಧಿಕಾರಿಗಳು ಇರುವುದರಿಂದ ಶಾಖೆಗಳು ತೆರೆದಿರುತ್ತವೆ ಆದರೆ ಅನೇಕ ನೌಕರರು ಮುಷ್ಕರದಲ್ಲಿ ಭಾಗವಹಿಸುವುದರಿಂದ ಸೇವೆಗಳ ಮೇಲೆ ಪರಿಣಾಮ ಬೀರುತ್ತಿದೆ ಎಂದು ಅವರು ಹೇಳಿದರು.
ಈ ವರ್ಷದ ಕೇಂದ್ರ ಬಜೆಟ್‌ನಲ್ಲಿ ಘೋಷಿಸಿದಂತೆ ಎರಡು ಸಾರ್ವಜನಿಕ ವಲಯದ ಬ್ಯಾಂಕ್‌ಗಳನ್ನು ಖಾಸಗೀಕರಣಗೊಳಿಸುವ ಕೇಂದ್ರ ಸರ್ಕಾರದ ಕ್ರಮವನ್ನು ಬ್ಯಾಂಕ್ ಒಕ್ಕೂಟಗಳು ವಿರೋಧಿಸುತ್ತಿವೆ. ಠೇವಣಿ ಮೇಲಿನ ಬಡ್ಡಿದರವನ್ನು ಹೆಚ್ಚಿಸಬೇಕು ಮತ್ತು ಸೇವಾ ಶುಲ್ಕವನ್ನು ಕಡಿತಗೊಳಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸುತ್ತಿದ್ದಾರೆ.
ಕೇರಳದಲ್ಲಿ ವ್ಯಾಪಾರ ಒಕ್ಕೂಟಗಳ ಪ್ರತಿಭಟನೆಯ ಪರಿಣಾಮ ರಸ್ತೆಗಳು ಖಾಲಿ ಖಾಲಿಯಾಗಿವೆ. ಕೆಲವೊಂದು ಖಾಸಗಿ ವಾಹನಗಳು ಮಾತ್ರ ರಸ್ತೆಗಳಲ್ಲಿ ಗೋಚರವಾಗುತ್ತಿವೆ ಮತ್ತು ಕೇರಳ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್‌ಆರ್‌ಟಿಸಿ) ಯ ಬಸ್‌ಗಳು ರಸ್ತೆಗಿಳಿದಿವೆ. ಆದರೆ, ತುರ್ತು ಸೇವೆಗಳಿಗೆ ಮುಷ್ಕರದ ಪರಿಣಾಮ ಬೀರಿಲ್ಲ. ಅಲ್ಲದೆ, ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (BPCL) ನಲ್ಲಿನ ಐದು ಒಕ್ಕೂಟಗಳನ್ನು ಭಾಗವಹಿಸದಂತೆ ಕೇರಳ ಹೈಕೋರ್ಟ್ ನಿರ್ಬಂಧಿಸಿದೆ. ತುರ್ತು ಪ್ರಯಾಣದ ಸೌಲಭ್ಯಗಳ ಅಗತ್ಯವಿರುವವರಿಗೆ ರೈಲು ನಿಲ್ದಾಣಗಳು ಮತ್ತು ಆಸ್ಪತ್ರೆಗಳಿಗೆ ತಲುಪಲು ರಾಜ್ಯದ ಪೊಲೀಸರು ವ್ಯವಸ್ಥೆ ಮಾಡಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ವ್ಯಾಪರ ಒಕ್ಕೂಟಗಳ ಪ್ರತಿಭಟನಾಕಾರರು ರಸ್ತೆಗೆ ಇಳಿದು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಿದ್ದಾರೆ. ಎಲ್ಲ ಸರ್ಕಾರಿ ನೌಕರರು ಕರ್ತವ್ಯಕ್ಕೆ ಹಾಜರಾಗಬೇಕು ಮತ್ತು ಕಚೇರಿಗಳನ್ನು ತೆರೆದಿರಬೇಕೆಂದು ರಾಜ್ಯ ಸರ್ಕಾರ ಸೂಚನೆ ನೀಡಿದೆ. ಕೋಲ್ಕತ್ತಾದ ಜಾದವ್‌ಪುರ ರೈಲು ನಿಲ್ದಾಣದಲ್ಲಿ ಎಡರಂಗದ ಸದಸ್ಯರು ಭಾರೀ ಸಂಖ್ಯೆಯಲ್ಲಿ ಜಮಾಯಿಸಿ ರೈಲು ಹಳಿಗಳನ್ನು ತಡೆದಿದ್ದಾರೆ.
ಕಾರ್ಮಿಕರು, ರೈತರು ಮತ್ತು ಜನರ ಮೇಲೆ ಪರಿಣಾಮ ಬೀರುವ ಸರ್ಕಾರದ ನೀತಿಗಳ ವಿರುದ್ಧ ಪ್ರತಿಭಟಿಸಲು ಕೇಂದ್ರ ಕಾರ್ಮಿಕ ಸಂಘಟನೆಗಳು ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಕರೆ ನೀಡಿದೆ. ಭಾರತೀಯ ಮಜ್ದೂರ್ ಸಂಘ (ಬಿಎಂಎಸ್) ಹೊರತುಪಡಿಸಿ, ಬಹುತೇಕ ಎಲ್ಲಾ ಕಾರ್ಮಿಕ ಸಂಘಟನೆಗಳು ಮುಷ್ಕರದಲ್ಲಿ ಭಾಗವಹಿಸುತ್ತಿವೆ ಎಂದು ಸುದ್ದಿ ಸಂಸ್ಥೆ ಎಎನ್‌ಐ ವರದಿ ಮಾಡಿದೆ.