ನವದೆಹಲಿ: ಭಾರತ-ಚೀನಾ ಸಂಬಂಧಗಳು ಹದಗೆಟ್ಟಿರುವ ಹಿನ್ನೆಲೆಯಲ್ಲಿ ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಶುಕ್ರವಾರ ಭಾರತಕ್ಕೆ ಭೇಟಿ ನೀಡಿದ್ದರು.
ಈ ಸಂದರ್ಭದಲ್ಲಿ ರಾಷ್ಟ್ರೀಯ ಭದ್ರತಾ ಸಲಹೆಗಾರ (ಎನ್‌ಎಸ್‌ಎ) ಅಜಿತ್ ದೋವಲ್ ಮತ್ತು ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರನ್ನು ವಾಂಗ್ ಯಿ ಭೇಟಿಯಾದರು. ಆದರೆ, ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಲು ವಾಂಗ್ ಯಿ ಬಯಸಿದ್ದರು. ಪ್ರಧಾನಮಂತ್ರಿ ಕಚೇರಿ ವಾಂಗ್ ಯಿ ಭೇಟಿ ಪ್ರಸ್ತಾಪವನ್ನು ನಿರಾಕರಿಸಿತು.
ವರದಿಗಳ ಪ್ರಕಾರ, ಮುಖ್ಯವಾಗಿ ವಾಂಗ್ ಯಿ, ಶುಕ್ರವಾರ ಪ್ರಧಾನಿಯನ್ನು ಭೇಟಿ ಮಾಡುವ ಉದ್ದೇಶದೊಂದಿಗೆ ಭಾರತಕ್ಕೆ ಆಗಮಿಸಿದ್ದರು. ಆದರೆ ನವದೆಹಲಿಯಲ್ಲಿರುವ ಪ್ರಧಾನ ಮಂತ್ರಿ ಕಚೇರಿ ಅದನ್ನು ನಿರಾಕರಣೆ ಮಾಡಿತು. ಯುಪಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಪ್ರಮಾಣ ವಚನ ಸಮಾರಂಭಕ್ಕೆ ಭಾಗಿಯಾಗುವ ದೃಷ್ಟಿಯಿಂದ ನಿರಾಕರಿಸಲಾಯಿತು.
ಮೂಲಗಳ ಪ್ರಕಾರ, ವಾಂಗ್ ಯಿ ಅವರು ಅಜಿತ್ ದೋವಲ್ ಅವರನ್ನು ಭೇಟಿಯಾದ ಬಳಿಕ ಚೀನಾಕ್ಕೆ ಆಗಮಿಸುವಂತೆ ಆಹ್ವಾನ ನೀಡಿದ್ದಾರೆ. ಈ ಬಗ್ಗೆ ಎನ್‌ಎಸ್‌ಎಯಿಂದ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿದೆ. ಪ್ರಸ್ತುತ ಸಮಸ್ಯೆಗಳ ಪರಿಹಾರದ ನಂತರ ಧೋವಲ್ ಬೀಜಿಂಗ್‌ಗೆ ಭೇಟಿ ನೀಡುವ ಸಾಧ್ಯತೆ ಇದೆ.
ಎರಡೂ ರಾಷ್ಟ್ರಗಳ ಮಧ್ಯೆ ನಿಧಾನಗತಿಯ ಪ್ರಗತಿ
ಶುಕ್ರವಾರ ಚೀನಾ ವಿದೇಶಾಂಗ ಸಚಿವರೊಂದಿಗೆ ನಿಯೋಗ ಮಟ್ಟದ ಮಾತುಕತೆ ನಡೆಸಿದ ಬಳಿಕ ವಿದೇಶಾಂಗ ಸಚಿವ ಜೈಶಂಕರ್ ಹೇಳಿಕೆ ಹೊರಬಿದ್ದಿದೆ. ಭಾರತ ಮತ್ತು ಚೀನಾ ನಡುವಿನ ಪ್ರಸ್ತುತ ಪ್ರಗತಿಯು ತುಂಬಾ ನಿಧಾನವಾಗಿದೆ. ವಾಂಗ್ ಯಿ ಭೇಟಿ ವೇಳೆ ಅದನ್ನು ತ್ವರಿತಗೊಳಿಸಲು ಚರ್ಚಿಸಲಾಗಿದೆ ಎಂದು ಹೇಳಿದರು.
ಏಪ್ರಿಲ್ 2020ರಲ್ಲಿ ಗಡಿಯಲ್ಲಿ ಚೀನಾದ ಕ್ರಮದಿಂದಾಗಿ ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧಗಳ ಮೇಲೆ ಪರಿಣಾಮ ಬೀರಿತು ಎಂದು ಜೈಶಂಕರ್ ಹೇಳಿದರು. ಎರಡು ವರ್ಷಗಳ ಅವಧಿಯಲ್ಲಿ ಗಡಿ ಪ್ರದೇಶಗಳಲ್ಲಿನ ಉದ್ವಿಗ್ನತೆಯ ಪರಿಣಾಮ ಉಭಯ ದೇಶಗಳ ನಡುವೆ ಕಂಡುಬಂದಿದೆ.
ಈ ನೆಲೆಯನ್ನು ಬಲಪಡಿಸಲು ಮತ್ತು ಭವಿಷ್ಯದಲ್ಲಿ ಎದುರಾಗಬಹುದಾದ ತೊಂದರೆಗಳನ್ನು ನಿವಾರಿಸಲು ನಾವು ಒಪ್ಪಂದವನ್ನು ಸಹ ಹೊಂದಿದ್ದೇವೆ ಎಂದು ಜೈಶಂಕರ್ ತಿಳಿಸಿದರು. ರಾಷ್ಟ್ರೀಯ ಭದ್ರತಾ ಸಲಹೆಗಾರರು ಚೀನಾದ ಜೊತೆಗಿನ ಸಭೆಯಲ್ಲಿ ಅಂತಾರಾಷ್ಟ್ರೀಯ ಒಪ್ಪಂದಗಳನ್ನು ಅನುಸರಿಸುವುದಕ್ಕೆ ಒತ್ತು ನೀಡಿದರು. ಚೀನಾದ ಪಡೆಗಳನ್ನು ಸಂಪೂರ್ಣವಾಗಿ ಹಿಂತೆಗೆದುಕೊಳ್ಳುವಂತೆ ಒತ್ತಾಯಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.