HEALTH TIPS

ಫ್ರೀಡಂ ಹೌಸ್‌ನ ವರದಿಯಲ್ಲಿ ಸತತ ಎರಡನೇ ವರ್ಷವೂ 'ಭಾಗಶಃ ಮುಕ್ತ' ಸ್ಥಾನದಲ್ಲಿಯೇ ಉಳಿದಿರುವ ಭಾರತ

Top Post Ad

Click to join Samarasasudhi Official Whatsapp Group

Qries

             ನವದೆಹಲಿ :ವಿಶ್ವಾದ್ಯಂತ ರಾಜಕೀಯ ಹಕ್ಕುಗಳು ಮತ್ತು ನಾಗರಿಕ ಸ್ವಾತಂತ್ರಗಳ ಮಟ್ಟವನ್ನು ಮೌಲ್ಯಮಾಪನಗೊಳಿಸುವ ಅಮೆರಿಕ ಸರಕಾರದಿಂದ ಅನುದಾನಿತ ಲಾಭರಹಿತ ಸಂಸ್ಥೆ ಫ್ರೀಡಂ ಹೌಸ್‌ನ ವಾರ್ಷಿಕ ವರದಿಯಲ್ಲಿ ಭಾರತವು ಸತತ ಎರಡನೇ ವರ್ಷವೂ 'ಭಾಗಶಃ ಮುಕ್ತ' ದೇಶದ ಸ್ಥಾನದಲ್ಲಿದೆ ಎಂದು theprint.in ವರದಿ ಮಾಡಿದೆ.

             ಪೆಗಾಸಸ್ ಸ್ಪೈವೇರ್ ಹಗರಣ, 'ಲವ್ ಜಿಹಾದ್' ಕಾನೂನುಗಳು ಮತ್ತು ಆದಿವಾಸಿಗಳ ಹಕ್ಕುಗಳ ಹೋರಾಟಗಾರ ಸ್ಟಾನ್ ಸ್ವಾಮಿಯವರ ಕಸ್ಟಡಿ ಸಾವು ಇವು ವರದಿಯಲ್ಲಿ ಭಾರತದ 'ಭಾಗಶಃ ಮುಕ್ತ ' ಸ್ಥಾನಮಾನಕ್ಕೆ ಉಲ್ಲೇಖಿಸಿರುವ ಪ್ರಮುಖ ಕಾರಣಗಳಲ್ಲಿ ಸೇರಿವೆ. 2021ರಲ್ಲಿ 100ಕ್ಕೆ 67ರಷ್ಟಿದ್ದ ದೇಶದ ಒಟ್ಟು ಅಂಕಗಳಿಕೆಯೂ 2022ರಲ್ಲಿ 66ಕ್ಕೆ ಇಳಿದಿದೆ. ಇದು ಆಗ್ನೇಯ ಆಫ್ರಿಕಾದ ಮಲಾವಿ ಮತ್ತು ದಕ್ಷಿಣ ಅಮೆರಿಕದ ಬೊಲಿವಿಯಾ ಗಳಿಸಿರುವ ಅಂಕಗಳಿಗೆ ಸಮನಾಗಿದೆ.

             1973ರಿಂದಲೂ ಫ್ರೀಡಂ ಹೌಸ್‌ನ ವಾರ್ಷಿಕ ವರದಿ ಪ್ರಕಟಗೊಳ್ಳುತ್ತಿದೆ. 2018, 2019 ಮತ್ತು 2020ರಲ್ಲಿ ಭಾರತವು 'ಮುಕ್ತ' ದೇಶದ ಸ್ಥಾನಮಾನವನ್ನು ಹೊಂದಿತ್ತು. ಆದರೆ ಕ್ರಮೇಣ ಅದರ ಸ್ಥಾನ ಮತ್ತು ಅಂಕ ಎರಡೂ ಕುಸಿದಿವೆ.

             ಮುಸ್ಲಿಮರಿಗೆ ಕಿರುಕುಳ ನೀಡುವ ತಾರತಮ್ಯದ ನೀತಿಗಳಲ್ಲಿ ಮತ್ತು ಎನ್‌ಜಿಒಗಳು,ಪತ್ರಕರ್ತರು ಮತ್ತು ಸಾಮಾಜಿಕ ಹೋರಾಟಗಾರರನ್ನು ಬೇಟೆಯಾಡುವಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ಪಕ್ಷ ಬಿಜೆಪಿಯ ಪಾತ್ರ ಪ್ರಮುಖವಾಗಿವೆ ಎಂದು ಬೆಟ್ಟು ಮಾಡಿರುವ ವರದಿಯು, ಸರಕಾರವನ್ನು ಟೀಕಿಸುವ ಸಾಮಾನ್ಯ ಪ್ರಜೆಗಳನ್ನು ದಂಡಿಸಲು ಇತ್ತೀಚಿನ ವರ್ಷಗಳಲ್ಲಿ ವಸಾಹತು ಯುಗದ ಮತ್ತು ಇತರ ಕಾನೂನುಗಳ ಬಳಕೆ ಹೆಚ್ಚುತ್ತಿದೆ ಎಂದು ಹೇಳಿದೆ.

            ಮೂರು ಕೃಷಿಕಾಯ್ದೆಗಳ ವಿರುದ್ಧ ಪ್ರತಿಭಟಿಸುತ್ತಿದ್ದ ರೈತರ ಬಗ್ಗೆ ಸರಕಾರದ ನಿಲುವು ಮತ್ತು ಕೇಂದ್ರ ಸಚಿವ ಅಜಯ ಮಿಶ್ರಾರ ಪುತ್ರ ಆಶಿಷ್ ಮಿಶ್ರಾ ತನ್ನ ಕಾರನ್ನು ಗುಂಪಿನ ಮೇಲೆ ನುಗ್ಗಿಸಿ ಪ್ರತಿಭಟನಾನಿರತ ರೈತರ ಸಾವುಗಳು ಸಂಭವಿಸಿದ್ದ ಉ.ಪ್ರದೇಶದ ಲಖಿಂಪುರ ಖೇರಿಗೆ ಭೇಟಿ ನೀಡಲು ಪ್ರಯತ್ನಿಸಿದ್ದ ಪ್ರತಿಪಕ್ಷ ನಾಯಕರ ಬಂಧನಗಳನ್ನೂ ವರದಿಯು ಪ್ರಮುಖವಾಗಿ ಬಿಂಬಿಸಿದೆ.

ವರದಿಯು ಭಾರತದಲ್ಲಿನ ಕೋವಿಡ್ ಸಾಂಕ್ರಾಮಿಕ ಮತ್ತು ಆರೋಗ್ಯ ಬಿಕ್ಕಟ್ಟಿನ ಕಳಪೆ ನಿರ್ವಹಣೆ ಕುರಿತು ಯಾವುದೇ ವಿಷಯವನ್ನು ನಿರ್ಬಂಧಿಸಿದ್ದ ಮಾಹಿತಿ ತಂತ್ರಜ್ಞಾನ ಕಾಯ್ದೆಯನ್ನು ಗಮನಕ್ಕೆ ತೆಗೆದುಕೊಂಡಿದೆ.

            ಫೆಬ್ರವರಿಯಲ್ಲಿ ಸರಕಾರವು ಟ್ವಿಟರ್ 500ಕ್ಕೂ ಅಧಿಕ ಖಾತೆಗಳನ್ನು ನಿರ್ಬಂಧಿಸುವಂತೆ ಮಾಡಿತ್ತು. ತನ್ನ ಆಣತಿಯನ್ನು ಪಾಲಿಸದಿದ್ದರೆ ಜೈಲುಶಿಕ್ಷೆಗೆ ಗುರಿಯಾಗಬೇಕಾಗುತ್ತದೆ ಎಂದು ಅದು ಭಾರತದಲ್ಲಿಯ ಟ್ವಿಟರ್ ಉದ್ಯೋಗಿಗಳಿಗೆ ಬೆದರಿಕೆಯೊಡ್ಡಿತ್ತು ಎಂದೂ ವರದಿಯು ಹೇಳಿದೆ. 


Below Post Ad

src="https://blogger.googleusercontent.com/img/b/R29vZ2xl/AVvXsEik3hLMvgO1WDICUKu_VF5lQRG3CMZau_AmC5MorS73B9lRYpLdDKJGTnB8c-U47BHqrAJ7dkiQUqiUWGQ6qg9A5jtCXrPkzIP4GPJfI00HmwhHX-3VG35FjkD_MxxI10r2v4FqSQ8LuyjG/w640-h360/samarasa+new+add.JPG" width="500px" / />



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.
Qries