ನವದೆಹಲಿ: ಜಮ್ಮು-ಕಾಶ್ಮೀರದಲ್ಲಿ 1989-2003ರ ಅವಧಿಯಲ್ಲಿ ನಡೆದಿದೆ ಎನ್ನಲಾದ ಹಿಂದೂಗಳು ಹಾಗೂ ಸಿಖ್ಖರ 'ಹತ್ಯಾಕಾಂಡ'ದ ದುಷ್ಕರ್ಮಿಗಳ ಪತ್ತೆಗಾಗಿ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸುವಂತೆ ಕೋರಿ ಸುಪ್ರೀಂಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ.

'ವಿ ದಿ ಸಿಟಿಜೆನ್ಸ್' ಎಂಬ ಸ್ವಯಂ ಸೇವಾ ಸಂಸ್ಥೆಯು ವಕೀಲ ವರುಣಕುಮಾರ್ ಸಿನ್ಹಾ ಅವರ ಮೂಲಕ ಈ ಅರ್ಜಿ ಸಲ್ಲಿಸಿದೆ.
ಈ 'ಹತ್ಯಾಕಾಂಡ'ದಲ್ಲಿ ಎಷ್ಟು ಜನ ಹಿಂದೂಗಳು ಹಾಗೂ ಸಿಖ್ಖರು ಪ್ರಾಣ ಕಳೆದುಕೊಂಡಿದ್ದಾರೆ, ಎಷ್ಟು ಜನ ಬದುಕುಳಿದಿದ್ದಾರೆ ಎಂಬ ಬಗ್ಗೆ ಗಣತಿ ನಡೆಸಬೇಕು. ಆಗ ಜಮ್ಮು-ಕಾಶ್ಮೀರ ತೊರೆದವರು ಈಗ ದೇಶದ ವಿವಿಧ ಭಾಗಗಳಲ್ಲಿ ನೆಲೆಸಿದ್ದಾರೆ. ಅವರ ಪುನರ್ವಸತಿಗೆ ಕ್ರಮ ಕೈಗೊಳ್ಳುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಪಿಐಎಲ್‌ನಲ್ಲಿ ಕೋರಲಾಗಿದೆ.
'ವಲಸೆ ಕಾರ್ಮಿಕರನ್ನು ಮಾತನಾಡಿಸಿರುವ ಅರ್ಜಿದಾರ, ಹತ್ಯಾಕಾಂಡ ಕುರಿತು ಪ್ರಕಟವಾಗಿರುವ ಲೇಖನಗಳು ಹಾಗೂ ಪುಸ್ತಕಗಳನ್ನು ಅಧ್ಯಯನ ಮಾಡಿದ್ದಾರೆ. ಪ್ರಮುಖವಾಗಿ ಆಗಿನ ರಾಜ್ಯಪಾಲ ಜಗಮೋಹನ್ ಅವರ 'ಮೈ ಫ್ರೋಜನ್ ಟರ್ಬುಲೆನ್ಸ್ ಇನ್ ಕಾಶ್ಮೀರ್' ಹಾಗೂ ರಾಹುಲ್ ಪಂಡಿತ ಅವರ 'ಅವರ್ ಮೂನ್ ಹ್ಯಾಸ್ ಬ್ಲಡ್ ಕ್ಲಾಟ್ಸ್' ಕೃತಿಗಳು ಆಗಿನ ಕಣಿವೆ ರಾಜ್ಯದಲ್ಲಿ ನಡೆದ ಭೀಕರ ನರಮೇಧ ಹಾಗೂ ಕಾಶ್ಮೀರಿ ಹಿಂದೂಗಳು-ಸಿಖ್ಖರ ವಲಸೆ ಕುರಿತು ಸಾಕಷ್ಟು ಮಾಹಿತಿ ಒದಗಿಸುತ್ತವೆ' ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.
1990ರಲ್ಲಿ ಹಿಂದೂಗಳು ಹಾಗೂ ಸಿಖ್ಖರು ವಲಸೆ ಹೋದ ನಂತರ ನಡೆದಿರುವ ಧಾರ್ಮಿಕ, ವಸತಿ, ಕೃಷಿ, ವಾಣಿಜ್ಯ, ಸಾಂಸ್ಥಿಕ ಸೇರಿದಂತೆ ಯಾವುದೇ ರೀತಿಯ ಸ್ಥಿರಾಸ್ತಿಯ ಮಾರಾಟ ಅಸಿಂಧು ಎಂಬುದಾಗಿ ಘೋಷಿಸಬೇಕು ಎಂದೂ ಪಿಐಎಲ್‌ನಲ್ಲಿ ಕೋರಲಾಗಿದೆ.