ನವದೆಹಲಿ: ಯುದ್ಧಪೀಡಿತ ಉಕ್ರೇನ್‌ನಿಂದ ಆಪರೇಷನ್ ಗಂಗಾ ಅಡಿಯಲ್ಲಿ ದೇಶಕ್ಕೆ ಮರಳಿರುವ ಭಾರತೀಯ ವಿದ್ಯಾರ್ಥಿಗಳು ತಮ್ಮ ಶಿಕ್ಷಣವನ್ನು ಪೂರ್ಣಗೊಳಿಸಲು ತೆಗೆದುಕೊಳ್ಳಬಹುದಾದ ಕ್ರಮಗಳನ್ನು ಪರಿಶೀಲಿಸುವುದಾಗಿ ಸರ್ಕಾರ ಸೋಮವಾರ ಲೋಕಸಭೆಗೆ ಭರವಸೆ ನೀಡಿದೆ.
ಉಕ್ರೇನ್‌ನಿಂದ ಭಾರತೀಯ ವಿದ್ಯಾರ್ಥಿಗಳನ್ನು ಸ್ಥಳಾಂತರಿಸಲು ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ನಡೆದ ಆಪರೇಷನ್ ಗಂಗಾ '130 ಕೋಟಿ ಭಾರತೀಯರ ಸಾಮೂಹಿಕ ಪ್ರಜ್ಞೆ'ಗೆ ಸಾಕ್ಷಿಯಾಗಿದೆ ಎಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿದ್ದಾರೆ.
ಭಾರತೀಯ ವಿದ್ಯಾರ್ಥಿಗಳು ತಮ್ಮ ಅಧ್ಯಯನವನ್ನು ಪೂರ್ಣಗೊಳಿಸಲು ನೆರವಾಗುವಂತೆ ಉಕ್ರೇನ್‌ನ ನೆರೆಯ ರಾಷ್ಟ್ರಗಳ ವಿಶ್ವವಿದ್ಯಾನಿಲಯಗಳೊಂದಿಗೆ ಸರ್ಕಾರವು 'ಮಾತುಕತೆ ನಡೆಸಲು ಅಥವಾ ಕಾರ್ಯನೀತಿ ರೂಪಿಸುವುದನ್ನು' ಪರಿಗಣಿಸಿದೆಯೇ ಎಂಬ ಕಾಂಗ್ರೆಸ್ ಸದಸ್ಯ ಗೌರವ್ ಗೊಗೊಯಿ ಅವರ ಪ್ರಶ್ನೆಗೆ ಪ್ರಧಾನ್ ಉತ್ತರಿಸಿದರು.
'ಉಕ್ರೇನ್‌ನಿಂದ ಅವರನ್ನು ಕರೆತಂದಾಗಲೇ, ಅವರು ಭವಿಷ್ಯದಲ್ಲಿ ವೈದ್ಯರಾಗಲು ಅಗತ್ಯವಿರುವ ಯಾವುದೇ ರೀತಿಯ ವ್ಯವಸ್ಥೆಗಳನ್ನು ಕೈಗೊಳ್ಳುವ ಬಗ್ಗೆ ಸರ್ಕಾರ ಚಿಂತನೆ ನಡೆಸಿದೆ' ಎಂದು ಸಚಿವರು ಪ್ರತಿಕ್ರಿಯಿಸಿದರು.
ಸದ್ಯ ಅವರನ್ನು ಆಘಾತದಿಂದ ಹೊರತರುವ ಸಮಯ ಇದಾಗಿದ್ದು, ನಾವೆಲ್ಲರೂ ಅದೇ ಕಾರ್ಯದಲ್ಲಿ ನಿರತರಾಗಿದ್ದೇವೆ. ಆಪರೇಷನ್ ಗಂಗಾ ಕಾರ್ಯಾಚರಣೆಗಾಗಿ ಕಾಂಗ್ರೆಸ್ ಪಕ್ಷವು ಪ್ರಧಾನಿ ನರೇಂದ್ರ ಮೋದಿಯವರಿಗೆ ಅಭಿನಂದಿಸಬೇಕು ಎಂದು ತಿಳಿಸಿದರು.