ಮಂಜೇಶ್ವರ: ರಾಷ್ಟ್ರೀಯ ಹೆದ್ದಾರಿ ಅಗಲೀಕರಣದ ಕಾಮಗಾರಿ ಭಾರೀ ಭರದಿಂದ ಸಾಗುತಿದ್ದು ಹಗಲು ರಾತ್ರಿ ಎನ್ನದೆ ಕಾಮಗಾರಿ ನಡೆಯುತ್ತಿದೆ.
ಇದೀಗ ತಲಪಾಡಿಯಿಂದ ಹೊಸಂಗಡಿ ತನಕದ ಕಾಮಗಾರಿಯನ್ನು ಪ್ರಥಮ ಹಂತದಲ್ಲಿ ಶೀಘ್ರ ಮುಗಿಸುವ ಉದ್ದೇಶದಿಂದ ಕಾಮಗಾರಿಗೆ ವೇಗತೆಯನ್ನು ಹೆಚ್ಚಿಸಲಾಗಿದೆ.
ಆದರೆ 5 ಕಿಲೋ ಮೀಟರ್ ಅಂತರದಲ್ಲಿ ಮಾತ್ರ ವಾಹನಗಳಿಗೆ ಎಡ ಬಲ ರಸ್ತೆಗಳಿಗೆ ತಿರುಗುವ ವ್ಯವಸ್ಥೆಯನ್ನು ಕಲ್ಪಿಸಲಾಗಿರುವುದಾಗಿ ಹೇಳಲಾಗುತಿದ್ದರೂ ಅಧಿಕೃತವಾಗಿ ಈ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗದೇ ಇರುವುದು ಸ್ಥಳೀಯರನ್ನು ಇಕ್ಕಟ್ಟಿನಲ್ಲಿ ಸಿಲುಕಿಸಿದೆ.
ಮಾತ್ರವಲ್ಲದೆ ತುಪಾಡಿಯಿಂದ ಆರಂಭಗೊಂಡು ಹೊಸಂಗಡಿ ತಲುಪುವ ದಾರಿ ಮಧ್ಯೆ ಶಾಲೆಗಳು ಸೇರಿದಂತೆ ಅತ್ಯಗತ್ಯ ಹಲವು ಜಂಕ್ಷನ್ ಗಳು ಲಭಿಸುವಾಗ ಕಾಲ್ನಡಿಗೆಯಲ್ಲಿ ಹೆದ್ದಾರಿಯನ್ನು ದಾಟಲು ಎಲ್ಲಿಯೂ ಅಂಡರ್ ಪಾಸ್ ಗಳಿಗೆ ವ್ಯವಸ್ಥೆಯನ್ನು ಕಲ್ಪಿಸಲಾಗುವುದಿಲ್ಲ. ಅಂಡರ್ ಪಾಸ್ ಗೆ 5 ಕಿಲೋ ಮೀಟರ್ ಸಂಚರಿಸಬೇಕೆಂಬ ವದಂತಿ ವ್ಯಾಪಕವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಹಿನ್ನೆಲೆಯಲ್ಲಿ ಅಧಿಕೃತರು ನಕ್ಷೆಯನ್ನು ತೋರಿಸಿ ಕಾಮಗಾರಿಯನ್ನು ಮುಂದುವರಿಸಬೇಕೆಂಬ ಬೇಡಿಕೆ ಹೆಚ್ಚಿದೆ.
ಕಾಮಗಾರಿ ಪೂರ್ಣಗೊಂಡ ಬಳಿಕ ಯಾವುದೇ ಬೇಡಿಕೆಗಳು ಈಡೇರಲು ಸಾಧ್ಯವಿಲ್ಲವೆಂಬ ಮಾತುಗಳು ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ಕಾಮಗಾರಿಗೆದುರಾಗಿ ಕೆಲವೊಂದು ಸಂಘಟನೆಗಳು ಹಾಗೂ ರಾಜಕೀಯ ಪಕ್ಷಗಳು ಪ್ರತಿಭಟನೆಗೆ ಸಿದ್ಧತೆಗಳನ್ನು ನಡೆಸುವ ಬಗ್ಗೆ ಸೂಚನೆಗಳು ಲಭಿಸಿವೆ.